ಹುಬ್ಬಳ್ಳಿಯ ರಾಜಧಾನಿ ಕಾಲೋನಿಯ ನಿವಾಸಿ ಹಾಗೂ ರಾಷ್ಟ್ರಸೇವಿಕಾ ಸಮಿತಿಯ ಪ್ರಾಂತೀಯ ಸಹ ಬೌದ್ಧಿಕ ಪ್ರಮುಖರಾಗಿದ್ದ ಶ್ರೀಮತಿ ಸುನಿತಾ ನಾರಾಯಣ ಜಾಧವ ಇಂದು ಅಪರಾಹ್ನ 12 ಗಂಟೆಯ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಬೆಳಗ್ಗೆ ಆರೋಗ್ಯವಾಗಿದ್ದು ನಗುನಗುತ್ತಾ ಮಾತನಾಡುತ್ತಿದ್ದ ಸುನಿತಕ್ಕ ತಮ್ಮ ಮನೆಯ ಮಾಳಿಗೆಯಲ್ಲಿ ಬಟ್ಟೆ ಹರವಲು ಹೋದವರು ಅಲ್ಲಿಯೇ ಕುಸಿದು ಬಿದ್ದರು. ಅವರಿಗೆ 60 ವರ್ಷಗಳಾಗಿತ್ತು. ಅವರ ಪತಿ ಶ್ರೀ ನಾರಾಯಣ ಜಾಧವ ವ್ಯಾಪಾರಸ್ಥರು, ಹಿರಿಯ ಮಗ ಚಿದಂಬರ, ಆತನ ಪತ್ನಿ ಹಾಗೂ ಕಿರಿಯ ಮಗ ಶ್ರೀಧರ ಹಾಗೂ ಅಪಾರ ಬಂಧು ಬಳಗದವರನ್ನು ಆಗಲಿ ಹೋಗಿದ್ದಾರೆ.
ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಮಾತನಾಡುತ್ತಿದ್ದ ಸುನಿತಕ್ಕ ರಾಷ್ಟ್ರ ಸೇವಿಕಾ ಸಮಿತಿಯ ಒಬ್ಬ ಸಮರ್ಪಿತ ಕಾರ್ಯಕರ್ತೆಯಾಗಿದ್ದರು. ತಮ್ಮ ಬೌದ್ಧಿಕ ಪ್ರತಿಭೆಯಿಂದ ಮಾತ್ರವಲ್ಲದೆ ಸಂಘಟನಾ ಚಾತುರ್ಯಗಳಿಂದ ಸಮಿತಿಯ ಅಮೂಲ್ಯ ಆಸ್ತಿಯಾಗಿದ್ದರು. ಭಜನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರವಚನಗಳ ಮೂಲಕ ನೂರಾರು ಮಹಿಳೆಯರ ಕಣ್ಮಣಿ ಆಗಿದ್ದರು.
ಸದಾ ನಗುಮುಖದಿಂದ, ಆತ್ಮೀಯತೆಯನ್ನು ಸಕಲರ ಪ್ರೀತಿ ಆದರ ಗಳಿಸಿದ ಸುನಿತಾ ಜಾಧವ ತಮ್ಮ ಬಡಾವಣೆ ಹಾಗೂ ಸಂಘಪರಿವಾರದವರಿಗೆ ಆತ್ಮೀಯ ಆದರಣಿಯ ಅಕ್ಕ ಆಗಿದ್ದರು. ಅತಿಥಿ ಸತ್ಕಾರಕ್ಕೆ ಮೂರ್ತರೂಪರಾಗಿದ್ದ ಸುನಿತಕ್ಕ ಅದೆಷ್ಟು ಜನರಿಗೆ ಮಾತೃವಾತ್ಸಲ್ಯದ ಧಾರೆ ಹರಿಸಿದ್ದಾರೆಂಬುವುದಕ್ಕೆ ಲೆಕ್ಕವಿಲ್ಲ.
ನಿರಂತರ ಚಟುವಟಿಕೆ, ಓಡಾಟ ಹಾಗೂ ಲವಲವಿಕೆಯಿಂದ ತಮ್ಮೆಲ್ಲ ಪ್ರತಿಭೆಗಳನ್ನು ರಾಷ್ಟ್ರ ಸೇವಿಕಾ ಸಮಿತಿಯ ಮೂಲಕ ದೇಶಕ್ಕೆ ಸಮರ್ಪಣೆ ಮಾಡಿದ್ದ ಸುನಿತಕ್ಕ ಇಂದು ಅಪರಾಹ್ನ ಇದ್ದಕ್ಕಿದ್ದಂತೆ ಕುಸಿದುಬಿದ್ದು ತನ್ನ ಜೀವನಯಾತ್ರೆಯನ್ನೇ ಮುಗಿಸುವಂಥ ಪ್ರಸಂಗ ನಿಜಕ್ಕೂ ಅತ್ಯಂತ ದೌರ್ಭಾಗ್ಯದ ಹಾಗೂ ದುಃಖದ ಸಂಗತಿ.
✍️ ಸು. ರಾಮಣ್ಣ, RSS ನ ಹಿರಿಯ ಪ್ರಚಾರಕರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.