ಬೆಂಗಳೂರು: ರಾಜ್ಯವು ಇಡೀ ದೇಶದಲ್ಲಿಯೇ ಪ್ರಪ್ರಥಮ ಎಂಬಂತೆ ʼಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿʼ ನೀತಿ (ER&D Policy) ಯನ್ನು ಪ್ರಕಟಿಸಿದ್ದು, ಈ ನೀತಿಯಿಂದಾಗಿ ಅಮೆರಿಕಾ ಸೇರಿದಂತೆ ವಿದೇಶೀ ಹೂಡಿಕೆಗಳಿಗೆ ಅನುಕೂಲವಾಗಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ಭಾರತ – ಅಮೆರಿಕ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ನೂತನ ಕೈಗಾರಿಕಾ ನೀತಿಯು ಕೈಗಾರಿಕೆಗಳ ಅಭಿವೃದ್ಧಿಯ ದೃಷ್ಟಿಕೋನದಿಂದ ಹೆಚ್ಚು ಮಹತ್ವ ಪಡೆಯಲಿದೆ. ಅತ್ಯುತ್ತಮ ಮಾನವ ಸಂಪನ್ಮೂಲ ಅಭಿವೃದ್ಧಿಗೂ ಇದು ಪೂರಕವಾಗಲಿದೆ ಎಂದು ಹೇಳಿದ್ದಾರೆ.
ಕೊರೋನಾ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಸಹಜಸ್ಥಿತಿಗೆ ಮರಳಿದೆ. ಇದಕ್ಕೆ ಪೂರಕವಾಗುವಂತೆ, ಕರ್ನಾಟಕವು ಎಲ್ಲಾ ಉದ್ಯಮಿಸ್ನೇಹಿ ಕ್ಷೇತ್ರಗಳಲ್ಲಿ ಮುಂದಿದ್ದು, ಹೂಡಿಕೆಗೆ ಅತ್ಯಂತ ಸೂಕ್ತ ತಾಣವಾಗಿದೆ. ನೂತನ ಉದ್ಯಮಗಳ ಸೃಷ್ಟಿಯ ಹಿನ್ನೆಲೆಯಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ. ಉತ್ಕೃಷ್ಟ ಮಾನವ ಸಂಪನ್ಮೂಲದ ದೃಷ್ಟಿಯಿಂದಲೂ ಇಲ್ಲಿ ಯಾವುದೇ ಕೊರತೆಗಳಾಗದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. 220 ಬಿಲಿಯನ್ನಷ್ಟು ಒಟ್ಟು ದೇಶದ ಉತ್ಪನ್ನ (ಜಿಎಸ್ಡಿಪಿ) ಹೊಂದಿರುವ ಕರ್ನಾಟಕದ ಕೊಡುಗೆ ಅಪಾರ. ಮಾಹಿತಿ-ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ. ಎಲ್ಲಾ ದೃಷ್ಟಿಕೋನಗಳಿಂದ ಗಮನಿಸಿದಾಗಲೂ ಕರ್ನಾಟಕ ರಾಜ್ಯ ಹೂಡಿಕೆ ಮಾಡಲು, ಉದ್ಯಮಗಳ ಆರಂಭಕ್ಕೆ ಸೂಕ್ತ ಸ್ಥಾನ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರ್ಚುಯಲ್ ಸಭೆಯಲ್ಲಿ ಭಾರತದಲ್ಲಿ ಸ್ಯಾನ್ಪ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್ ಜನರಲ್ ಡಾ.ಟಿ.ವಿ.ನಾಗೇಂದ್ರ ಪ್ರಸಾದ್, ಉಪಕಾನ್ಸುಲ್ ಜನರಲ್ ರಾಜೇಶ್ ನಾಯಕ್, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್ ಛೇಂಬರ್ಸ್, ವೆಸ್ಟ್ ಕೋಸ್ಟ್ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ACS ಡಾ. ರಮಣರೆಡ್ಡಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.