ನವದೆಹಲಿ: 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪಂಚಾಯಿತಿಗಳಿಗೆ ನೇರವಾಗಿ ನಿಧಿಯನ್ನು ಒದಿಗಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಪುರುಷೋತ್ತಮ್ ರೂಪ್ಲಾ ಲೋಕಸಭೆಗೆ ಇಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, ಮಧ್ಯ ಪ್ರದೇಶದ ಹಲವು ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರ್ ಗಳನ್ನು ಕಲ್ಪಿಸಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದಾಗ ಕೇಂದ್ರ ಸರ್ಕಾರ ಪಂಚಾಯಿತಿಗಳಿಗೆ ನೇರವಾಗಿ ಹಣವನ್ನು ನೀಡುತ್ತಿದೆ. ಗ್ರಾಮ ಪಂಚಾಯಿತಿಗಳ ಕಂಪ್ಯೂಟರೀಕರಣಕ್ಕೆ 1.5 ಲಕ್ಷ ರೂಪಾಯಿ ಹಣ ನೀಡಲಾಗುತ್ತಿದೆ ಎಂದರು. ಈ ಹಣದ ವೆಚ್ಚದ ಬಗ್ಗೆ ಸಮನ್ವಯ ಸಾಧಿಸಲು ಸಂಸದರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದೇ ಎಂಬ ಬಿಜೆಪಿ ಸದಸ್ಯ ರಾಜೀವ್ ಪ್ರತಾಪ್ ರೂಢಿ ಅವರ ಸಲಹೆಗೆ ಸ್ಪಂದಿಸಿದ ಸಚಿವರು, ಇದೊಂದು ಉತ್ತಮ ಸಲಹೆ, ಈ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಸಂಸದರ ಕ್ಷೇತ್ರಗಳಲ್ಲಿ ಬಿತ್ತನೆ ಬೀಜ ಕೊರತೆ ಸಂಬಂಧ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಬಿತ್ತನೆ ಬೀಜದ ಕೊರತೆ ಉಂಟಾಗದಂತೆ ರಾಜ್ಯಗಳು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳುವಂತೆಯ ಸೂಚಿಸಲಾಗಿದೆ. ದೇಶದಲ್ಲಿ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ತಗ್ಗಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾವಯವ ಗೊಬ್ಬರ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ನ್ಯಾನೊ ರಸಗೊಬ್ಬರ ಬಳಕೆ ಹೆಚ್ಚಿಸಲು ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ರಾಷ್ಟ್ರೀಯ ಫರ್ಟಿಲೈಸರ್ ಕಾರ್ಪೊರೇಷನ್ ಬಂಡವಾಳ ಹಿಂತೆಗೆತದಿಂದ ಬರುವ ಹಣವನ್ನು ಹಸಿರುಗೊಬ್ಬರಗಳ ಪ್ರ್ತೋತ್ಸಾಹಕ್ಕೆ ಬಳಸಬೇಕು ಎಂಬ ಸದಸ್ಯರ ಸಲಹೆಗೆ ಸ್ಪಂದಿಸಿದ ಸಚಿವರು, ಸರ್ಕಾರ ಬಂಡವಾಳ ಹಿಂತೆಗೆತ ಕ್ರಮವನ್ನು ಆರಂಭಿಸಿಲ್ಲ. ಈ ಸಂಬಂಧ ಸಂಪುಟ ಕಾರ್ಯದರ್ಶಿ ನೇತೃತ್ವದ ಕಾರ್ಯದರ್ಶಿ, ಸಂಬಂಧಪಟ್ಟ ಎಲ್ಲ ಭಾಗೀದಾರರೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಿದರು.
ರೈತರ ಖಾತೆಗಳಿಗೆ ರಸಗೊಬ್ಬರ ಸಬ್ಸಿಡಿಯನ್ನು ವರ್ಗಾಯಿಸಲು ಸರ್ಕಾರ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.