ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ನಿಗದಿತ ಸಮಯಕ್ಕೆ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜಿಲ್ಲಾಧಿಕಾರಿಗಳು ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಚುನಾವಣೆಯನ್ನು ನಡೆಸಲು ಸರ್ಕಾರ ಸಿದ್ಧವಿದೆ ಎಂಬ ವಿಚಾರವನ್ನು ಈಗಾಗಲೇ ಚುನಾವಣಾ ಆಯೋಗಕ್ಕೂ ತಿಳಿಸಲಾಗಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರ ಮರು ವಿಂಗಡಣೆಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ಸಂಬಂಧ ಗುರುವಾರ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡುವ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಹಾಲಿ ಇರುವ ಮಾರ್ಗಸೂಚಿಗಳಲ್ಲಿ ಅನೇಕ ಲೋಪದೋಷಗಳಿವೆ ಎಂದು ಶಾಸಕರು ಆರೋಪಿಸಿದ್ದಾರೆ. ಇಂತಹ ಲೋಪದೋಷಗಳಿಂದ ಮುಂದೆ ಆಡಳಿತಾತ್ಮಕವಾಗಿ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಗರ್ ಹುಕುಂ ಸಮಿತಿಗಳನ್ನು ಶೀಘ್ರದಲ್ಲೇ ರಚನೆ ಮಾಡಿ, ಅಧ್ಯಕ್ಷರುಗಳನ್ನು ನೇಮಕ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಏನೇ ಸಮಸ್ಯೆಗಳು ಇದ್ದರು ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ನೊಂದಾಯಿತ ಸೊಸೈಟಿಗಳು ಅಸ್ತಿತ್ವ ಕಳೆದುಕೊಂಡಿದ್ದರೆ ಅವುಗಳಿಗೆ ನೀಡಿದರು ಜಮೀನನ್ನು ವಾಪಸ್ಸು ಪಡೆಯುವ ಬಗ್ಗೆ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಸಾಧ್ಯವಾದರೆ ಈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲೇ ವಾಸ್ತವ್ಯ ಹೂಡಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ನೀಡಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಭರ್ತಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಜಿಲ್ಲಾಧಿಕಾರಿಗಳು ಅತ್ಯಂತ ಪಾರದರ್ಶಕವಾಗಿ ನೇಮಕ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಸಚಿವ ಅಶೋಕ ಸ್ಪಷ್ಟಪಡಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.