ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿಯೂ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಜ್ಞರು ಮತ್ತು ಅಧಿಕಾರಿಗಳ ಜೊತೆಗೆ ಇಂದು ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಏರಿಕೆಯಾಗುತ್ತಿರುವುದು, ಅದರ ತಡೆಗೆ ಕೈಗೊಳ್ಳಬಹುದಾದ ಕ್ರಮಗಳಿಗೆ ಸಂಬಂಧಿಸಿದಂತೆ ಸಿಎಂ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಇದು ಕೊರೋನಾ 2 ನೇ ಅಲೆಯ ಸೂಚನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಭೆಯಲ್ಲಿ ರಾಜ್ಯದಲ್ಲಿ ಕೊರೋನಾ ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ ಕಠಿಣ ನಿಯಮಗಳ ಬಗ್ಗೆಯೂ ಅಧಿಕಾರಿಗಳು ಮತ್ತು ತಜ್ಞರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಹಾಗೆಯೇ ರಾಜ್ಯದಲ್ಲಿಯೂ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದರ ತಡೆಗೆ ಬಹಳ ಮುಖ್ಯವಾಗಿ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಹೆಚ್ಚು ಅಗತ್ಯ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜೊತೆಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿಯೂ ಕೊರೋನಾ ಹೆಚ್ಚತ್ತಿದ್ದು, ರಾಜ್ಯಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಹೇಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ದಂಡ ತೆರಬೇಕು. ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡುವಂತೆಯೂ ಅವರು ಸೂಚಿಸಿದ್ದಾರೆ.
ಸಾರ್ವಜನಿಕ ಸಮಾರಂಭಗಳಲ್ಲಿ ಜನರ ಭಾಗವಹಿಸುವಿಕೆಗೆ ಕಡಿವಾಣ, ಸಾರ್ವಜನಿಕ ವಾಹನಗಳಲ್ಲಿ ಹೆಚ್ಚು ಜನರನ್ನು ಹಾಕಿ ಚಲಾಯಿಸದಂತೆಯೂ ಸೂಚನೆ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ ನೀಡಲಾಗಿದೆ ಎಂಬುದಾಗಿಯೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಹೆಚ್ಚಿಸುವ ಸಂಬಂಧವೂ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಅಂತರರಾಜ್ಯ ಪ್ರಯಾಣಿಕರಿಗೆ ಕೊರೋನಾ ವರದಿ ಕಡ್ಡಾಯ ಎಂದು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಗೆಯೇ 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆಯೂ ಸೂಚಿಸಲು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ 1 ರಿಂದ 6 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಶಾಲಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯವನ್ನು ತಜ್ಞರು ಮುಖ್ಯಮಂತ್ರಿಗಳ ಮುಂದಿರಿಸಿದ್ದಾರೆ. ಈಗಾಗಲೇ ಆರಂಭವಾಗಿರುವ 6 ರಿಂದ 9 ರ ವರೆಗಿನ ತರಗತಿಗಳನ್ನು ರದ್ದು ಮಾಡುವಂತೆಯೂ ಸಲಹೆ ನೀಡಲಾಗಿದೆ. ಅಪಾರ್ಟ್ಮೆಂಟ್ಗಳಲ್ಲಿ ವ್ಯಾಕ್ಸಿನೇಷನ್ ಸೌಲಭ್ಯಗಳನ್ನು ಒದಗಿಸುವುಂತೆಯೂ ತಜ್ಞರು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಟೆಸ್ಟಿಂಗ್ ಮಿತಿ ಹೆಚ್ಚಿಸುವಂತೆಯೂ ಅಧಿಕಾರಿಗಳು ಸೂಚಿಸಿದ್ದಾರೆ.
ರಾಜ್ಯದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರದ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಬೇಕಿದೆ. ನಮ್ಮ ಆರೋಗ್ಯದ ಕಾಳಜಿಯನ್ನು ನಾವೇ ಮಾಡುವ ದೃಷ್ಟಿಯಿಂದ ಸರ್ಕಾರ ಈಗಾಗಲೇ ಸೂಚಿಸಿರುವಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.