ಬೆಂಗಳೂರು: ದಿನಪತ್ರಿಕೆಯೊಂದರಲ್ಲಿ ವರದಿಯಾಗಿರುವ ರಾಜ್ಯಾಧ್ಯಕ್ಷರ ಬದಲಾವಣೆಯ ಸುದ್ದಿ ಸಂಪೂರ್ಣವಾಗಿ ಕಪೋಲಕಲ್ಪಿತ, ದುರುದ್ದೇಶದಿಂದ ಕೂಡಿದ್ದು, ಕರ್ನಾಟಕದ ಭಾರತೀಯ ಜನತಾ ಪಾರ್ಟಿಯ ಘಟಕ ಈ ರೀತಿಯ ಬೇಜವಾಬ್ದಾರಿಯ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತಾ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಬಿಜೆಪಿಯ ಮಾನ್ಯ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಅಧಿಕಾರದ ಒಂದೂವರೆ ವರ್ಷದಲ್ಲಿ ರಾಜ್ಯದ ಎಲ್ಲಾ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಹಾಗೂ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದರಸದಂತೆ ಪ್ರವಾಸ ಮಾಡಿ, ಸಂಘಟನಾತ್ಮಕವಾಗಿ ಪಕ್ಷವನ್ನು ಅತ್ಯಂತ ಸದೃಢಗೊಳಿಸಿದ್ದಾರೆ. 2019ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಗಳ 15 ಕ್ಷೇತ್ರಗಳ ಸ್ಥಾನಗಳ ಪೈಕಿ 12ರಲ್ಲಿ ಗೆದ್ದಿರುವುದು, 2020ರಲ್ಲಿ ನಡೆದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದಿರುವುದು ಮತ್ತು ಇದೇ ಅವಧಿಯಲ್ಲಿ ನಾಲ್ಕು ನಾಲ್ಕು ವಿಧಾನಪರಿಷತ್ ಸ್ಥಾನಗಳನ್ನೂ ಗೆದ್ದಿರುವುದು ಅವರ ಸಂಘಟನಾತ್ಮಕ ಕಾರ್ಯಕ್ಷಮತೆಗೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಪರಿಚಯಿಸಿದ ಗ್ರಾಮ ಸ್ವರಾಜ್ಯ ಸಮಾವೇಶಗಳ ಪರಿಕಲ್ಪನೆ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 86,183 ಸ್ಥಾನಗಳ ಪೈಕಿ 45,246 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿರುವುದು ದಾಖಲೆ. ಅಲ್ಲದೆ, 5,670 ಪಂಚಾಯತ್ಗಳ ಪೈಕಿ 3,142 ಪಂಚಾಯತ್ಗಳನ್ನು ಬಿಜೆಪಿ ಬೆಂಬಲಿತರು ಗೆದ್ದಿರುವುದು ಅಧ್ಯಕ್ಷರ ಸಕ್ರಿಯ ಕಾರ್ಯವೈಖರಿಗೆ ಮತ್ತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಸ್ವಭಾವಕ್ಕೆ ರಾಜ್ಯಾದ್ಯಂತ ಸಿಕ್ಕಿದ ಮನ್ನಣೆ ಎಂದು ಅವರು ತಿಳಿಸಿದ್ದಾರೆ.
ಪಕ್ಷವು ಜನಪರವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಳಿನ್ಕುಮಾರ್ ಕಟೀಲ್ ಅವರ ಸಮರ್ಥ ಕಾರ್ಯ ನಿರ್ವಹಣೆಯಿಂದ ಸದೃಢವಾಗಿ ಬೆಳೆದಿದೆ. ಇತ್ತೀಚೆಗೆ ʼಜನಸೇವಕ ಸಮಾವೇಶʼ ಗಳನ್ನೂ ಹಮ್ಮಿಕೊಂಡಿದ್ದು, ಅದರಿಂದಾಗಿ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲೂ ಗರಿಷ್ಠ ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷವು ಈಗಾಗಲೇ ಸಜ್ಜುಗೊಂಡಿದೆ. ಅವೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವೂ ಇದೆ ಎಂದು ತಿಳಿಸಿದ್ದಾರೆ.
ಕೋವಿಡ್, ಪ್ರವಾಹದ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಂಕಷ್ಟ ಪರಿಹಾರಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವಂತೆ ಯಡಿಯೂರಪ್ಪ ಅವರು ಮತ್ತು ನಳಿನ್ಕುಮಾರ್ ಕಟೀಲ್ ಅವರು ಪ್ರೇರೇಪಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ. ಸರಕಾರದ ಯೋಜನೆಗಳು ಕಟ್ಟಕಡೆಯ ನೈಜ ಫಲಾನುಭವಿಗೆ ತಲುಪುವಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ತಂಡವು ಕಾರ್ಯಪ್ರವೃತ್ತವಾಗಿದೆ. ಇವುಗಳಿಂದಾಗಿ ನಳಿನ್ ಕುಮಾರ್ ಕಟೀಲ್ ಅವರ ಕುರಿತು ಪಕ್ಷದಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅಪಾರ ಗೌರವ ಮತ್ತು ಅಭಿಮಾನ ಬೆಳೆದಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಯ ಸುದ್ದಿ ಕೇವಲ ದುರುದ್ದೇಶ ಹೊಂದಿರುವ ಕಪೋಲಕಲ್ಪಿತ ವರದಿ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.