ಮಂಗಳೂರು: ಅಗಲಿದ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿ, ತಕ್ಷಣವೇ ಆಸ್ಪತ್ರೆಗೆ ತೆರಳಿ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯೋರ್ವರಿಗೆ ಚಿಕಿತ್ಸೆ ನೀಡಿ ಜೀವ ಉಳಿಸುವ ಮೂಲಕ ಮಂಗಳೂರಿನ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರ ಮಾನವೀಯ ಮೌಲ್ಯ, ಮಾದರಿ ಸೇವೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಡಾ. ಪದ್ಮನಾಭ ಕಾಮತ್ ಅವರ ತಂದೆ, ಡಾ. ಮಂಜುನಾಥ್ ಕಾಮತ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಹದೆಗೆಟ್ಟ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಪದ್ಮನಾಭ ಕಾಮತ್ ಅವರು ಮನೆಗೆ ತೆರಳಿ ತಂದೆಗೆ ಚಿಕಿತ್ಸೆ ನೀಡುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಕಾಮತ್ ಅವರು ಅಸುನೀಗಿದ್ದಾರೆ. ಆಸ್ಪತ್ರೆಗೆ ಮಂಜುನಾಥ್ ಅವರನ್ನು ಕೊಂಡೊಯ್ದು ಅವರ ಮರಣವನ್ನು ಖಚಿತಪಡಿಸಿಕೊಂಡ ಬಳಿಕ, ಆಸ್ಪತ್ರೆಗಳ ಸರ್ಟಿಫಿಕೇಟ್ ಪಡೆಯುವ ಕೆಲಸಗಳಿಗೆ 15 ನಿಮಿಷಗಳ ಬಿಡುವಿತ್ತು. ಈ ಸಂದರ್ಭದಲ್ಲಿ ಪದ್ಮನಾಭ ಅವರು ನಿರ್ವಹಿಸುತ್ತಿದ್ದ ಆಸ್ಪತ್ರೆಯಿಂದ ಹೃದ್ರೋಗಿಯೋರ್ವರಿಗೆ ತುರ್ತು ಶಸ್ತ್ರಚಿಕಿತ್ಸೆಯಾಗಬೇಕಾಗಿರುವ ಬಗ್ಗೆ ಕರೆ ಬಂದಿದೆ. ತಕ್ಷಣವೇ ಅವರು ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ನೆರವೇರಿಸಿ, ರೋಗಿಯ ಜೀವ ಉಳಿಸಿದ್ದಾರೆ. ಆ ಮೂಲಕ ತಮ್ಮ ನೋವಿನ ಸಂದರ್ಭದಲ್ಲಿಯೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಫೆ. 27 ರಂದು ಮೃತ ಡಾ. ಮಂಜುನಾಥ್ ಕಾಮತ್ ಅವರ ಉತ್ತರಕ್ರಿಯೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿಯೂ ಆಸ್ಪತ್ರೆಯ ಅಡುಗೆ ಸಿಬ್ಬಂದಿಯೋರ್ವರಿಗೆ ಹೃದಯಾಘಾತವಾದ ವಿಚಾರ ತಿಳಿದು, ತಕ್ಷಣವೇ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.