ಬೆಂಗಳೂರು: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನದಂದು ನಡೆದ ಹಿಂಸಾಚಾರದ ಹಿಂದೆ ದಲ್ಲಾಳಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷಗಳು, ದೇಶ ವಿರೋಧಿ ಖಲಿಸ್ತಾನಿ ಶಕ್ತಿಗಳಿವೆ. ಇದೆಲ್ಲವೂ ತಿಳಿದಿದ್ದರೂ ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಪ್ರಚಾರಕ್ಕಾಗಿ ನವದೆಹಲಿ ದಂಗೆ ಹಿಂದೆ ಬಿಜೆಪಿ ಒಳಸಂಚಿದೆ ಎಂದು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಖರ್ಗೆ ಅವರ ಸೋಲಿಗೆ ಅವರ ಪಕ್ಷದವರೇ ಕಾರಣ ಎಂಬುದನ್ನು ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ತಿಳಿಸಿದೆ. ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲದ ದುಸ್ಥಿತಿ ಇದೆ. ಕುಟುಂಬ ರಾಜಕೀಯಕ್ಕೆ ಜೋತುಬಿದ್ದ ಪಕ್ಷವು ಅನಿವಾರ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ವಿರೋಧ ಪಕ್ಷದ ಮುಖಂಡನ ಸ್ಥಾನಮಾನ ನೀಡಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳಿತು ಎಂದು ಕಟೀಲ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನದಂದು ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುವುದನ್ನು ಕಾಂಗ್ರೆಸ್ ಪಕ್ಷ ನಿರೀಕ್ಷಿಸಿತ್ತು. ಆ ಗಲಭೆ, ಆಗುವ ಹಾನಿಗೆ ಪೊಲೀಸರು ಮತ್ತು ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸುವ ಕೇಂದ್ರ ಸರಕಾರವೇ ಕಾರಣ ಎಂದು ದೂರುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಎಂಬುದು ಖರ್ಗೆ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಒಳಜಗಳದ ಕಾರಣದಿಂದಲೇ ಎಲ್ಲೆಡೆ ಸೋತು ಸುಣ್ಣವಾಗುತ್ತಿದೆ. ಆದರೂ ಕರ್ನಾಟಕದಲ್ಲಿ ಗೆದ್ದು ಅಧಿಕಾರಕ್ಕೇರುವ ಹಗಲುಗನಸನ್ನು ಆ ಪಕ್ಷದ ನಾಯಕರು ಬಿಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ರೈತಪರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಯಿಂದ ಕಾಂಗ್ರೆಸ್ ಪಕ್ಷ ನಿರಂತರವಾಗಿ ನೆಲಕಚ್ಚುತ್ತಿರುವುದನ್ನು ಗಮನಿಸಿ, ಕೇವಲ ಪ್ರಚಾರದ ದೃಷ್ಟಿಯಿಂದ ಖರ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.