ಉಡುಪಿ: 16 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರು ಪೋರ್ಚುಗೀಸರ ಕಪಿಮುಷ್ಟಿಯಿಂದ ಬಸ್ರೂರನ್ನು ರಕ್ಷಣೆ ಮಾಡಿದ ಸವಿನೆನಪಿನಲ್ಲಿ ಫೆ. 13 ರಂದು ʼಬಸ್ರೂರು ಸ್ವಾತಂತ್ರ್ಯ ಮಹೋತ್ಸವʼ ಆಚರಣೆ ಮಾಡಲಾಗಿದೆ ಎಂದು ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಅವರು ತಿಳಿಸಿದರು.
ಫೆ.13 ರಂದು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಬಸ್ರೂರು ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೋರ್ಚುಗೀಸರ ಕೈಯಿಂದ ಬಸ್ರೂರನ್ನು ಮತ್ತೆ ನಮ್ಮದೇ ಆಡಳಿತಕ್ಕೆ ತಂದ ಕೀರ್ತಿ ಶಿವಾಜಿ ಮಹಾರಾಜರದ್ದು. ತನ್ನ ನೌಕಾಬಲವನ್ನು ಆ ಕಾಲದಲ್ಲಿಯೇ ಸಮರ್ಥವಾಗಿ ಮುನ್ನಡೆಸಿ, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ಬಸ್ರೂರು ಬಂದರನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಶಿವಾಜಿ ಮಹಾರಾಜರು ಯಶಸ್ಸು ಗಳಿಸಿದ್ದರು. ಅವರ ಈ ಶೌರ್ಯವನ್ನು ಶಿವಾಜಿಯ ಅಭಿಮಾನಿಗಳು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಬಸ್ರೂರು ಸ್ವಾತಂತ್ರ್ಯವಾದ ದಿನವನ್ನು ಇಂದಿಗೂ ಶಿವಾಜಿ ಮಹಾರಾಜರ ಶೌರ್ಯದ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹ ಡಾ. ವಾದಿರಾಜ ಗೋಪಾಡಿ ಅವರು ಮಾತನಾಡಿ, ಬಸ್ರೂರಿಗೆ ಸುಧೀರ್ಘ ಇತಿಹಾಸವಿದೆ. ಅಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಬಸ್ರೂರಿಗೆ ಪೋರ್ಚುಗೀಸರ ಕೈಯಿಂದ ಮುಕ್ತಿ ನೀಡಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಇಂದು ಕೆಲ ಇತಿಹಾಸಕಾರರು ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ನೈಜ ಇತಿಹಾಸ ನಮಗೆ ಶಿವಾಜಿಯ ಕಥೆಗಳಿಂದ ತಿಳಿದು ಬರುತ್ತದೆ. ಇದನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಪುಣೆಯ ರಾಷ್ಟ್ರೀಯ ಚಿಂತಕ ಸಂದೀಪ್ ಮಹಂತ್ ಅವರು ಶಿವಾಜಿಯ ದಂಡಯಾತ್ರೆ, ಬಸ್ರೂರು ಸ್ವಾತಂತ್ರ್ಯದ ಬಗ್ಗೆ ವಿವರಣೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.