ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಕಾರ್ಯಗಳಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಆನ್ಲೈನ್ ಆಡಿಟ್ ಕ್ರಮದ ಜಾರಿಗೆ ಮುಂದಾಗಿದೆ.
ಗ್ರಾ. ಪಂ. ಗಳ ಖರ್ಚು- ವೆಚ್ಚಗಳ ಲೆಕ್ಕದಲ್ಲಿ ಪಾರದರ್ಶಕತೆ, ಲೆಕ್ಕ ಪರಿಶೋಧನೆಯಲ್ಲಿ ಏಕರೂಪತೆಯನ್ನು ಸಾಧಿಸುವ ನಿಟ್ಟಿನಲ್ಲಿಯೂ ಈ ಕ್ರಮ ಹೆಚ್ಚು ಪೂರಕವಾಗಲಿದೆ. ರಾಜ್ಯದಲ್ಲಿ 6,028 ಗ್ರಾಮ ಪಂಚಾಯತ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಇವೆಲ್ಲವುಗಳಿಗೂ ವಾರ್ಷಿಕ 50 ಲಕ್ಷಗಳಿಂದ ಹಿಡಿದು 1 ಕೋಟಿ ರೂ. ಗಳ ವರೆಗೆ ಅನುದಾನವನ್ನು ಸರ್ಕಾರ ಒದಗಿಸಿಕೊಡುತ್ತದೆ. ಅವುಗಳ ವೆಚ್ಚಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆನ್ಲೈನ್ ಆಡಿಟ್ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿದೆ.
ವೆಬ್ ಆಧಾರಿತ ತಂತ್ರಜ್ಞಾನದ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಆಗುವ ಲೋಪದೋಷಗಳು, ಲೆಕ್ಕ ಪರಿಶೋಧನೆಯಲ್ಲಿ ಮಂದಗತಿ ತಪ್ಪಿಸಲು ಮತ್ತು ಪಾರದರ್ಶಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ರಾಜ್ಯದ 30 ಜಿಲ್ಲಾ ಪಂಚಾಯತ್ಗಳ ವ್ಯಾಪ್ತಿಯಲ್ಲಿ 20% ದಂತೆ ಸುಮಾರು 1230 ಗ್ರಾಮ ಪಂಚಾಯತ್ಗಳಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಸಿಬ್ಬಂದಿಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.