ಮಡಿಕೇರಿ: ಗೋಹತ್ಯೆ, ಗೋವುಗಳ ಕಳ್ಳ ಸಾಗಾಣಿಕೆ ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆಯೊಂದನ್ನು ರಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಸಂಬಂಧ ಕೊಡಗಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋ ಹತ್ಯೆ, ಗೋವುಗಳ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಸಮಿತಿ ರಚಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಸಲಹೆ, ಸೂಚನೆಗಳನ್ನು ಸಹ ಸ್ವೀಕರಿಸಲಾಗುತ್ತಿದೆ. ಗೋ ಹತ್ಯೆ, ಕಳ್ಳ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸುವ ಚಿಂತನೆ ಹೊಂದಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಜೊತೆಗೆ ಕೊರೋನಾ ಲಾಕ್ಡೌನ್ ನಂತರದಲ್ಲಿ ಅಪರಾಧ ಕೃತ್ಯ, ಕೊಲೆ ಮೊದಲಾದವುಗಳು ಹೆಚ್ಚಾಗಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿರುವುದಾಗಿ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ತುಂಬುವುದಕ್ಕೆ ನೇಮಕಾತಿಯನ್ನು ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.
ಹಾಗೆಯೇ ರಾಜ್ಯದಲ್ಲಿ ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕುವುದು, ಆ ಮೂಲಕ ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ವೈದ್ಯರ ಶಿಫಾರಸ್ಸು ಇಲ್ಲದೆ ನಿಷೇಧಿತ ಔಷಧ ಮಾರಾಟ ಮಾಡಿದಲ್ಲಿ, ಡ್ರಗ್ಸ್ ವ್ಯವಹಾರ ಕಂಡುಬಂದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ಬೊಮ್ಮಾಯಿ ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇ ಗಳ ವಿರುದ್ಧ, ಅವುಗಳಿಗೆ ಬೆಂಬಲ ನೀಡುವ ಅಧಿಕಾರಿಗಳ ವಿರುದ್ಧ ಸಹ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.