ಅಸ್ಸಾಂ: ಅಮೆರಿಕಾದ ಶಾಲೆಗಳಲ್ಲಿ ಭಾರತದ ಅಸ್ಸಾಂ ಮೂಲದ ರೈತರೊಬ್ಬರ ಜೀವನದ ಯಶೋಗಾಥೆಯನ್ನು ಪಠ್ಯವಾಗಿ ಬೋಧನೆ ಮಾಡುತ್ತಿದ್ದಾರೆ.
ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಖ್ಯಾತರಾಗಿರುವ ಜಾಧವ್ ಪಾಯೇಂಗ್ ಅವರ ಜೀವನದ ಸಾಧನೆ ಅಮೆರಿಕದ ಮಕ್ಕಳಿಗೆ ಪಠ್ಯವಾಗಿದೆ. 4 ವರ್ಷಗಳ ಅವಿರತ ಶ್ರಮದ ಮೂಲಕ 550 ಎಕರೆಗಳಷ್ಟು ಬರಡು ಭೂಮಿಯನ್ನು ಅರಣ್ಯವನ್ನಾಗಿ ಮಾಡಿದ ಮಹಾ ಸಾಧಕ ಈಗ ಅಮೆರಿಕದ ಶಾಲಾ ಪಠ್ಯದಲ್ಲಿಯೂ ರಾರಾಜಿಸುವಂತಾಗಿದೆ.
ಅಸ್ಸಾಂ ರಾಜ್ಯದ ಮಜುಲಿ ದ್ವೀಪದಲ್ಲಿ ನಡೆಯುತ್ತಿದ್ದ ಪರಿಸರ ನಾಶವನ್ನು ಕಂಡು, ಈ ಪರಿಸರವನ್ನು ಸಂರಕ್ಷಣೆ ಮಾಡಲು ತಾನೇನಾದರೂ ಮಾಡಬೇಕಲ್ಲಾ ಎಂದು ಯೋಚಿಸಿ, ಸುಮಾರು 550 ಎಕರೆ ಬಂಜರು ಪ್ರದೇಶವನ್ನು ಕಾಡನ್ನಾಗಿ ಪರಿವರ್ತನೆ ಮಾಡುವ ಮೂಲಕ ಜಾಧವ್ ಮಾದರಿಯಾಗಿದ್ದಾರೆ. ಏಕಾಂಗಿಯಾಗಿ ಅಲ್ಲಲ್ಲಿ ಮರ ಗಿಡಗಳನ್ನು ನೆಟ್ಟು, ಪೋಷಿಸಿ ಬೃಹತ್ ಕಾನನದ ಕರ್ತೃವಾಗಿರುವ ಜಾಧವ್ ತಮ್ಮ ಶ್ರಮದ ಮೂಲಕವೇ ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇವರ ಈ ಮಹತ್ಕಾರ್ಯಕ್ಕೆ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನೂ ನೀಡಿ ಗೌರವಿಸಿದೆ.
ಅಸ್ಸಾಂನ ಈ ಫಾರೆಸ್ಟ್ ಮ್ಯಾನ್ನ ಜೀವನದ ಬಗ್ಗೆ ಅಮೆರಿಕದ ಬ್ರಿಸ್ಟೋಲ್ ಕೆನೆಟಿಕಟ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಮನೋಬಲವೊಂದಿದ್ದರೆ ಅಸಾಧ್ಯ ಯಾವುದೂ ಇಲ್ಲ ಎಂಬುದನ್ನು ತಿಳಿಯಪಡಿಸಲು, ಅವರಲ್ಲಿ ಧನಾತ್ಮಕವಾಗಿ ಚಿಂತಿಸುವ ಶಕ್ತಿ ತುಂಬಲು ಇವರ ಬದುಕನ್ನಾಧರಿಸಿದ ಪಠ್ಯಕ್ರಮ ಅಳವಡಿಸಿಕೊಂಡಿರುವುದಾಗಿ ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಸದ್ಯ ಇವರ ಕಾಡಿನಲ್ಲಿ ಅನೇಕ ವನವಾಸಿ ಪ್ರಾಣಿ ಪಕ್ಷಿಗಳೂ ಆಶ್ರಯ ಪಡೆದಿದೆ. ಜೊತೆಗೆ ಮನೋಭಿಲಾಷೆ ಮಹತ್ವಾಕಾಂಕ್ಷೆ ಹೊಂದಿರುವ ಮನುಷ್ಯ ಯಾವುದೇ ರೀತಿಯ ಸಾಧನೆ ಮಾಡುವುದಕ್ಕೂ ಸಾಧ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಅಸ್ಸಾಂನ ಜಾಧವ್. ತಮ್ಮ ಕಾಯಕದ ಮೂಲಕವೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಫೂರ್ತಿಯಾಗಿರುವ ಜಾಧವ್ ಅವರ ಶ್ರಮ, ಕಾರ್ಯ ಎಲ್ಲರಿಗೂ ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.