
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ಕಸ, ತ್ಯಾಜ್ಯ ಎಸೆಯುವುದು, ಮಲ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಕಳೆದ ಐದೇ ತಿಂಗಳಿನಲ್ಲಿ 75 ಲಕ್ಷ ರೂ. ಗಳಷ್ಟು ದಂಡ ಸಂಗ್ರಹ ಮಾಡಿದೆ.
ಈ ಸಂಬಂಧ ಮಾಹಿತಿ ನೀಡಿರುವ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್, ನಗರದಲ್ಲಿ ಘನತ್ಯಾಜ್ಯ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 250 ಮಂದಿ ಮಾರ್ಷಲ್ಗಳನ್ನು ನಿಯೋಜಿಸಲಾಗಿತ್ತು. ಆದರೆ, ಅನಂತರ ಕೊರೋನಾ ಸಂಕಷ್ಟ ಮಿತಿ ಮೀರತೊಡಗಿದಾಗ ಈ ಮಾರ್ಷಲ್ಗಳನ್ನು ಕೊರೋನಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಯಿತು. ಆ ಬಳಿಕ ಮತ್ತೆ ಘನತ್ಯಾಜ್ಯ ನಿರ್ವಹಣೆಗೆ 250 ಮಾರ್ಷಲ್ಗಳನ್ನು ನಿಯೋಜನೆ ಮಾಡಲಾಯಿತು. ಇವರು ಸಾರ್ವಜನಿಕ ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವವರನ್ನು, ಕಸ ಎಸೆಯುವವರ ಮೇಲೆ ನಿಗಾ ವಹಿಸಿದ್ದಾರೆ. ಜೊತೆಗೆ ಬಿಬಿಎಂಪಿಯ ಎಂಟು ವಲಯಗಳಿಗೂ ಎಂಟು ಗಸ್ತು ವಾಹನಗಳನ್ನು ನಿಯೋಜನೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
2020 ರ ಜೂನ್ ತಿಂಗಳಿಗೆ ಮೊದಲು ಬೇಕಾಬಿಟ್ಟಿ ಕಸ ಎಸೆಯುವವರಿಗೆ 200 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಆ ಬಳಿಕ ಈ ಮೊತ್ತವನ್ನು 1000 ಕ್ಕೆ ಏರಿಕೆ ಮಾಡಲಾಗಿದೆ. ಎರಡನೇ ಬಾರಿ ಪರಿಸರಕ್ಕೆ ಕಸ, ತ್ಯಾಜ್ಯ ಸುರಿದು ಸಿಕ್ಕಿಬಿದ್ದಲ್ಲಿ 2000 ರೂ. ದಂಡ ವಿಧಿಸಲಾಗುತ್ತಿದೆ. ಜೊತೆಗೆ ಕಸ ವಿಂಗಡಿಸುವವರು ವಿಂಗಡಣೆ ಮಾಡದ ಕಸ ಸಂಗ್ರಹ ಮಾಡಿದಲ್ಲಿ ಅವರಿಗೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


