ಮಂಗಳೂರು: ಕಳೆದ 69 ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ನವೆಂಬರ್ 15ರ ಮುನ್ನ ಈ ವಿಮಾನ ನಿಲ್ದಣದ ನಿರ್ವಹಣಾ ಜವಾಬ್ದಾರಿಯನ್ನು ಅದಾನಿ ಸಮೂಹ ಸಂಸ್ಥೆ ವಹಿಸಿಕೊಳ್ಳಬೇಕಿದೆ.
ಈ ಸಂಬಂಧ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಅದಾನಿ ಸಂಸ್ಥೆಗೆ ನೀಡಲಾಗುವ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂದು ಅದಾನಿ ಸಂಸ್ಥೆ ಹಲವು ತಿಂಗಳಿನಿಂದ ಅಧ್ಯಯನ ನಡೆಸಿದೆ. ಪ್ರಸ್ತುತ ಇರುವ ನಿಲ್ದಾಣದ ನಿರ್ದೇಶಕ ಹುದ್ದೆ ಕೆಲವು ತಿಂಗಳುಗಳ ಕಾಲ ಮಾತ್ರ ಇರಲಿದೆ. ಆ ಬಳಿಕ ಅದಾನಿ ಸಂಸ್ಥೆ ನಿಲ್ದಾಣದ ಉಸ್ತುವಾರಿಗಾಗಿ ಸಿಇಒ ಅವರನ್ನು ನೇಮಕ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಒಂದು ವರ್ಷದವರೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಲಾಭ ನಷ್ಟ ವ್ಯವಹಾರ, ಬಾಡಿಗೆಯಂತಹ ವ್ಯವಹಾರಗಳ ಜವಾಬ್ದಾರಿಯನ್ನು ಅದಾನಿ ಸಂಸ್ಥೆ ತೆಗೆದುಕೊಳ್ಳಲಿದ್ದರೆ, ವಿಮಿನಗಳ ಆಗಮನ-ನಿರ್ಗಮನ ವಿಚಾರಗಳನ್ನು ಪ್ರಾಧಿಕಾರ ನೋಡಿಕೊಳ್ಳಲಿದೆ. ಜೊತೆಗೆ ಈ ಸಂಬಂಧ ಅದಾನಿ ಸಂಸ್ಥೆಗೆ ಈ ಎಲ್ಲಾ ವ್ಯವಹಾರಗಳ ಸಂಬಂಧ ಮಾರ್ಗದರ್ಶನವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಿರುವ ಉದ್ಯೋಗಿಗಳು ಹಿಂದಿನಂತೆಯೇ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ವರ್ಷ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಅದಾನಿ ಸಂಸ್ಥೆ ನಡೆಸಲಿದೆ. ಜೊತೆಗೆ ಅದಾನಿ ಸಂಸ್ಥೆ ಅಧಿಕಾರ ವಹಿಸಿಕೊಂಡ ಬಳಿಕ ಟರ್ಮಿನಲ್ ಕಟ್ಟಡದ ಬಾಡಿಗೆ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತ್ಯೇಕ ಏರ್ಪೋರ್ಟ್ ಕಾಂಪ್ಲೆಕ್ಸ್, ಮಾಲ್ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣ ಅಭಿವೃದ್ಧಿ ನಿಟ್ಟಿನಲ್ಲಿ ಅದಾನಿ ಕಂಪೆನಿ ಹೂಡಿಕೆ ಮಾಡಲಿದೆ.
ಹಾಗೆಯೇ ಮಂಗಳೂರಿನಿಂದ ಮೈಸೂರಿಗೆ ಅಕ್ಟೋಬರ್ 25 ರಿಂದ ತೊಡಗಿದಂತೆ ಪ್ರಾಯೋಗಿಕ ವಿಮಾನ ಸಂಚಾರ ಸೇವೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಸಾಧ್ಯತಾ ವರದಿ ಆಧರಿಸಿ ವಿಮಾನ ಸೇವೆ ಮುಂದುವರೆಸುವ ಸಂಬಂಧ ಚಿಂತನೆ ನಡೆಸುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.