ಬೆಂಗಳೂರು: 250 ಬಡ ಹೃದ್ರೋಗಿಗಳ ಚಿಕಿತ್ಸೆಗೆ ಸಹಾಯಕವಾಗುವಂತೆ ಕೆನರಾ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿಯಲ್ಲಿ 25.97 ಲಕ್ಷ ರೂ. ಹಣಕಾಸು ನೆರವು ಮತ್ತು 5 ವೀಲ್ ಚೇರ್ಗಳನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ನೀಡಿದೆ.
ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರಿಗೆ 25.97 ಲಕ್ಷ ರೂ. ಗಳ ಚೆಕ್ ಮತ್ತು ವೀಲ್ ಚೇರ್ಗಳನ್ನು ಕೆನರಾ ಬ್ಯಾಂಕ್ನ ಕಾರ್ಯ ನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈ ಅವರು ಹಸ್ತಾಂತರ ಮಾಡಿದ್ದಾರೆ.
ಕೆನರಾ ಬ್ಯಾಂಕ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿಯ ಅಡಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 64 ಗ್ರಾಮೀಣ ಸ್ವ ಉದ್ಯೋಗ ತರಬೇತಿಗಳ ಮಖೇನ ಗ್ರಾಮ ಪ್ರದೇಶದ ನಿರುದ್ಯೋಗಿ ಯುವ ಜನಾಂಗಕ್ಕೆ ಸ್ವ ಉದ್ಯೋಗಕ್ಕೆ ಅವಕಾಶ ಮಾಡಿಕೊಡುತ್ತಿದೆ. ದೇಶದಾದ್ಯಂತ 115 ಕೇಂದ್ರಗಳಲ್ಲಿ ವಿತ್ತೀಯ ಸಾಕ್ಷರತಾ ಕೇಂದ್ರಗಳ ಮುಖಾಂತರ ಬ್ಯಾಂಕಿಂಗ್ ಕ್ಷೇತ್ರದ ಬಗೆಗೂ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮಣಿಮೇಖಲೈ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಆರ್ಥಿಕ ಸಾಮರ್ಥ್ಯ ಪರಿಗಣಿಸಿ ಚಿಕಿತ್ಸೆ ನೀಡುತ್ತಿಲ್ಲ. ಬದಲಾಗಿ, ಅವರು ಆರೋಗ್ಯ ಮತ್ತೆ ಪಡೆಯುವಂತಾಗಲು ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ ಹಣಕ್ಕಲ್ಲ. ಬಡರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.