ಮೈಸೂರು: ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಜಯದೇವ ಆಸ್ಪತ್ರೆಯ ಮುಖ್ಯಸ್ಥ ಹೃದಯ ತಜ್ಞ ಡಾ. ಸಿ. ಎನ್. ಮಂಜುನಾಥ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಕೊರೋನಾ ಸಂಕಷ್ಟದ ನಡುವೆ ಈ ಬಾರಿಯ ದಸರಾ ಬಂದಿದ್ದು, ಕೊರೋನಾ ವಾರಿಯರ್ಸ್ನಿಂದಲೇ ದಸರಾ ಉದ್ಘಾಟನೆ ನಡೆಸಲು ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಡಾ. ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸಮಾರಂಭದಲ್ಲಿ ಮೈಸೂರಿನ ಪೌರ ಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ರುಕ್ಮಿಣಿ, ಆಶಾ ಕಾರ್ಯಕರ್ತೆ ನೂರ್ ಜಾನ್, ಪೊಲೀಸ್ ಕಾನ್ಸ್ಟೇಬಲ್ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತ ಅಯೂಬ್ ಅಹಮದ್ ಅವರನ್ನು ಸನ್ಮಾನಿಸಲಾಗುವುದು ಎಂದೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ದಸರಾ ಕಾರ್ಯಕ್ರಮವನ್ನು ತಜ್ಞರ ತಂಡ ನೀಡಿದ ವರದಿಯನ್ವರವೇ ಆಚರಣೆ ಮಾಡಲಾಗುವುದು. ಎಲ್ಲಾ ಕಾರ್ಯಕ್ರಮಗಳೂ ನಿಯಮಗಳಂತೆಯೇ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರು, ಜನಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.