ಬೆಂಗಳೂರು : ಮೊತ್ತ ಮೊದಲ ಬಾರಿಗೆ ಸೈಬರ್ ಸೇಫ್ ಗರ್ಲ್ ವಿ-3.೦ ಎಂಬ ವಿನೂತನ ಆನ್ಲೈನ್ ಪೋರ್ಟಲ್ ಅನಾವರಣಗೊಂಡಿದೆ. ಗೃಹ ಕಾರ್ಯದರ್ಶಿ ರೂಪಾ ಡಿ. (ಐಪಿಎಸ್) ಮತ್ತು ಸ್ಯಾಂಡಲ್ವುಡ್ ಹೀರೋ ಕಿಚ್ಚ ಸುದೀಪ್ ಆನ್ಲೈನ್ನಲ್ಲಿ ಈ ಪೋರ್ಟಲ್ ಅನಾವರಣಗೊಳಿಸಿದರು.
’ಸೈಬರ್ ಸೇಫ್ ಗರ್ಲ್’ ಎಂಬುದು ಭಾರತೀಯರಿಗೆ ಆನ್ಲೈನ್ನಲ್ಲಿ ಉಚಿತವಾಗಿ ಮಾಹಿತಿ ನೀಡುವ, ವೆಬ್ಕಲಿಕೆಯ ಪೋರ್ಟಲ್. ಈ ಪೋರ್ಟಲ್ನಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಬಹುದು. ವಿವಿಧ ರೀತಿಯ ಸೈಬರ್ ಬೆದರಿಕೆಗಳು ಹೇಗೆ ಬರುತ್ತವೆ, ಸೈಬರ್ ಹಗರಣಗಳು ಹೇಗೆ ನಡೆಯುತ್ತವೆ ಎಂಬುದನ್ನು ಅರಿಯುವುದು ಹಾಗೂ ಆನ್ಲೈನ್ ಬ್ರೌಸಿಂಗ್ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಹೇಗೆ ವರ್ತಿಸಬೇಕು ಎಂಬ ಮಾಹಿತಿಯನ್ನು ಈ ಪೋರ್ಟಲ್ ನೀಡುತ್ತದೆ. ಈ ಪೋರ್ಟಲ್ನಲ್ಲಿರುವ ಆನ್ಲೈನ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ನಾನು ಸೈಬರ್ ಸುರಕ್ಷಿತ ವ್ಯಕ್ತಿ’ ಎನ್ನುವ ಪ್ರಮಾಣ ಪತ್ರವನ್ನೂ ಪಡೆಯಬಹುದು. ಸರಳವಾದ ಯೂಸರ್ ಇಂಟರ್ಫೇಸ್ನ್ನು ಟ್ಯಾಬ್, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಬಳಸಬಹುದು.
ಈ ಕೋರ್ಸ್ನಲ್ಲಿ 30 ಮಾಡ್ಯುಲ್ (ಘಟಕ)ಗಳಿವೆ. ಆನಿಮೇಟೆಡ್ ಸಿನಿಮಾ, ಸರಣಿ ಉಪನ್ಯಾಸ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಮುಖ ಪರಿಚ್ಛೇಧಗಳು ಮತ್ತು ಕಾಯ್ದೆಗೆ ಸಂಬಂಧಿಸಿದ ಇತರ ಮಾಹಿತಿ ಈ ಮಾಡ್ಯುಲ್ನಲ್ಲಿವೆ. ಪ್ರತೀ ಮಾಡ್ಯುಲ್ನಲ್ಲಿಯೂ ಒಂದು ಆನ್ಲೈನ್ ಪರೀಕ್ಷೆ ಇರುತ್ತದೆ. ಪ್ರಸ್ತುತ ಈ ವೆಬ್ಸೈಟ್ ಬೀಟಾ ಮೋಡ್ ನಲ್ಲಿ ನಡೆಯುತ್ತಿದೆ.
ಈ ಪೋರ್ಟಲ್ನಲ್ಲಿ ಕ್ಯುರೇಟರ್ ಆಗಿ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಉಪನ್ಯಾಸಕ ಡಾ. ಅನಂತಪ್ರಭು ಜಿ. ಅವರು ವಿವರಣೆ ನೀಡಿದ್ದಾರೆ. ಅವರು ಸೈಬರ್ ಸುರಕ್ಷತೆಯ ತರಬೇತುದಾರರೂ ಹೌದು. ಅಷ್ಟೇ ಅಲ್ಲ, ಸೈಬರ್ ಕಾನೂನುಗಳು ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು. ಕರ್ನಾಟಕ ಜ್ಯುಡಿಷಿಯಲ್ ಅಕಾಡೆಮಿ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿಗೆ ಕೂಡ ಅವರು ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸೈಬರ್ ಸೇಫ್ ಗರ್ಲ್ 3 ಎಂಬ ಪುಸ್ತಕವನ್ನೂ ಆಸಕ್ತರು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಪೋರ್ಟಲ್ನಲ್ಲಿ ನೀಡಲಾಗಿದೆ.
ಡಾ. ಅನಂತ ಪ್ರಭು ಹೇಳುವ ಪ್ರಕಾರ,- ಇಡೀ ಜಗತ್ತು ಆನ್ಲೈನ್ನತ್ತ ಮುಖಮಾಡಿರುವಾಗ, ಆನ್ಲೈನ್ನಲ್ಲಿ ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ, ಮುಖ್ಯವಾಗಿ ಈ ಕೋವಿಡ್ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿರುವ ಈ ಸಂದರ್ಭದಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾಕೆಂದರೆ ಇತ್ತೀಚೆಗೆ ಆನ್ಲೈನ್ ಅಪರಾಧ, ದರೋಡೆ, ಹಗರಣ, ಬೆದರಿಕೆ ಮುಂತಾದವುಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗಿ ಕಂಡುಬರುತ್ತಿವೆ. ಆದ್ದರಿಂದ ಈ ಪೋರ್ಟಲ್ ಎಲ್ಲ ವಯಸ್ಸಿನವರಿಗೂ ಅಗತ್ಯವಿರುವ ಆನ್ಲೈನ್ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆನ್ಲೈನ್ ವ್ಯವಹಾರಕ್ಕೆ ಹೊಸದಾಗಿ ಪ್ರವೇಶ ಪಡೆದವರಿಗೆ ಹಾಗೂ ಡಿಜಿಟಲ್ ಲೋಕದಲ್ಲಿ ನಡೆಯುವ ವಂಚನೆಗೆ ಕಾರಣ ಮತ್ತು ಅದರ ವಿಧಾನಗಳನ್ನು ಅರಿವಿಲ್ಲದವರಿಗೆ ಈ ಪೋರ್ಟಲ್ನಲ್ಲಿರುವ ಮಾಹಿತಿ ಬಹಳ ನೆರವಾಗಲಿದೆ.
ಸೈಬರ್ ಸುರಕ್ಷಿತ ದೇಶವನ್ನು ನಿರ್ಮಿಸುವ ದೃಷ್ಟಿಯಿಂದ, ಪ್ರತಿಯೊಬ್ಬರೂ ಈ ಸೈಬರ್ ಸುರಕ್ಷತೆಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಬೇಕು ಎಂಬುದು ಡಾ. ಪ್ರಭು ಅವರ ಸಲಹೆ. ಸಹ್ಯಾದ್ರಿಯಲ್ಲಿ ಹೊಸದಾಗಿ ಆರಂಭವಾಗಿರುವ ’ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸೈಬರ್ ಸೆಕ್ಯುರಿಟಿ’ ವಿಭಾಗದಲ್ಲಿ ಈ ನಿಟ್ಟಿನಲ್ಲಿ ಅನೇಕ ಪ್ರಾಯೋಗಿಕ ತರಬೇತಿ (hands on training) ಗಳನ್ನು ಆಯೋಜಿಸುವ ಉದ್ದೇಶ ಅವರಿಗಿದೆ.
ಈ ಪೋರ್ಟಲ್ ಅನ್ನು ಅವರ ಸಹಾಯಕ ಸಂಶೋಧಕ ರೋಹನ್ ಡಾನ್ ಸಾಲಿನ್ಸ್ ಅವರು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ನಿವೃತ್ತ ಎಡಿಜಿಪಿ ಸಂಜಯ್ ಸಹಾಯ್, ಬೆಂಗಳೂರಿನ ಎಸಿಪಿ ರಿನಾ ಸುವರ್ಣ ಮತ್ತು ವೈಕುಂಠ ಪ್ರಭು ಅವರು ಅಗತ್ಯ ಮಾಹಿತಿ ಒದಗಿಸಿದ್ದಾರೆ.
ಈ ಪೋರ್ಟಲ್ ಅನ್ನು ಉಚಿತವಾಗಿ ಬಳಸಲು ಕ್ಲಿಕ್ ಮಾಡಿ: www.cybersafegirl.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.