ಟೊಕಿಯೋ: ಇಂಡೋ ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾಗೆ ತಕ್ಕ ಶಾಸ್ತಿ ಮಾಡುವ ನಿಟ್ಟಿನಲ್ಲಿ ಸಹಕಾರ ನೀಡಲು ಭಾರತ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಒಮ್ಮತದ ನಿರ್ಧಾರ ಕೈಗೊಂಡಿವೆ.
ಈ ನಿರ್ಧಾರವನ್ನು ಜಪಾನ್ನ ಟೊಕಿಯೋದಲ್ಲಿ ನಡೆದ ನಾಲ್ಕೂ ರಾಷ್ಟ್ರಗಳ ವಿದೇಶಾಂಗ ಸಚಿವರ ಕ್ವಾಡ್ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಲಾಗಿದೆ.
ಸಭೆಯ ಬಳಿಕ ಈ ಸಂಬಂಧ ಜಪಾನ್ ಮಾಹಿತಿ ನೀಡಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ನೆಲೆಸಲು ಕ್ವಾಡ್ ರಾಷ್ಟ್ರಗಳು ಸಮ್ಮತಿಸಿರುವುದಾಗಿ ತಿಳಿಸಿದೆ. ಈ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಆಸ್ಟ್ರೇಲಿಯಾದ ಮ್ಯಾರಿಸ್ ಪಾಯ್ನೆ, ಅಮೆರಿಕದ ಮೈಕ್ ಪೊಂಪಿಯೋ, ಜಪಾನಿನ ತೊಷಿಮಿಟ್ಸು ಮೊಟೆಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್, ವಿಶ್ವದ ಶಾಂತಿಗಾಗಿ ಎಲ್ಲಾ ರಾಷ್ಟ್ರಗಳೂ ಬದ್ಧವಾಗಬೇಕು. ಒಂದು ದೇಶ ಮತ್ತೊಂದು ದೇಶದ ಭಾವನೆಗಳನ್ನು ಗೌರವಿಸುವಂತಾಗಬೇಕು. ವಿವಾದಗಳನ್ನು ಶಾಂತಿಯಿಂದ ಬಗೆಹರಿಸಲು ಪ್ರಯತ್ನ ನಡೆಸಬೇಕು. ಇಂತಹ ನಿಯಮಕ್ಕೆ ಭಾರತ ಸದಾ ಬದ್ಧ ಎಂದು ತಿಳಿಸಿದ್ದಾರೆ. ಜೊತೆಗೆ ಭಾರತದ ಔದಾರ್ಯವನ್ನು ಚೀನಾ, ಪಾಕಿಸ್ಥಾನಗಳು ಗೌರವಿಸುವುದನ್ನು ಕಲಿತರೆ ಉತ್ತಮ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅಮೆರಿಕದ ಪೊಂಪಿಯೋ, ಚೀನಾದ ಶೋಷಣೆಯಿಂದ ಅಮೆರಿಕ ತನ್ನ ಪ್ರಜೆಗಳನ್ನು ರಕ್ಷಿಸಬೇಕಾಗಿದೆ. ಇದೇ ರೀತಿಯ ದಬ್ಬಾಳಿಕೆ ಚೀನಾ ಸಮುದ್ರದ ದಕ್ಷಿಣ, ಪೂರ್ವ ಭಾಗಗಳಲ್ಲಿ ಕಾಣಬಹುದಾಗಿದೆ. ಚೀನಾದ ದರ್ಪವನ್ನು ಕೊನೆಗಾಣಿಸಬೇಕಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.