ಬೆಂಗಳೂರು: ರಾಜ್ಯದಲ್ಲಿಯೂ ಕೊರೋನಾ ಸೋಂಕಿನ ಅಟ್ಟಹಾಸ ಇಳಿಕೆಯಾಗುವ ಸೂಚನೆಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ, ಕೊರೋನಾ ತಡೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮದನ್ವಯ ರಾಜ್ಯದಲ್ಲಿ ಸರ್ಕಾರ ಯಾರಿಗೆ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡುವಂತೆ ಸೂಚಿಸುವುದೋ, ಅವರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿಲ್ಲ. ಒಂದು ವೇಳೆ ತಪ್ಪಿಸಿಕೊಂಡಲ್ಲಿ ಅಂತಹವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ 50 ಸಾವಿರ ರೂ. ದಂಡ ವಿಧಿಸುವ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ನೀಡಿದೆ.
ರೋಗ ವ್ಯಾಪಿಸುವ ತೀವ್ರತೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸೋಂಕಿತರು ಮತ್ತು ಶಂಕಿತರಿಗೆ ಗುರುತಿಸಿ ಪರೀಕ್ಷೆ ನಡೆಸಲಾಗುವುದು. ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್, ಕಂಟೈನ್ಮೆಂಟ್, ಬಫರ್ ವಲಯದ ನಿವಾಸಿಗಳು, ಕೊರೋನಾ ಪೀಡಿತರ ಸಂಪರ್ಕ ಹೊಂದಿದವರು, ಸೋಂಕು ಲಕ್ಷಣಗಳು ಇರುವವರು ಈ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲು ಸೂಚಿಸಲಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಯಲು, ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆಯಲು, ಮರಣ ಪ್ರಮಾಣ ಕಡಿಮೆ ಮಾಡುವಲ್ಲಿಯೂ ಇದು ಪೂರಕವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಕೊರೋನಾ ಸೋಂಕು ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೆಲವರು ಹಿಂದೇಟು ಹಾಕುತ್ತಾರೆ. ಇನ್ನು ಕೆಲವು ಜನರು ಅಸಹಕಾರ ತೋರುತ್ತಾರೆ. ಇದರಿಂದ ಕೊರೋನಾ ಏರಿಕೆಯಾಗುತ್ತಲೇ ಇದೆ. ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರನ್ನು ದಾರಿಗೆ ತರಲು ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.