ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ, ದೇಶದಲ್ಲಿ ಶಾಲಾ ಶಿಕ್ಷಣದ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಸಚಿವ ರಮೇಶ್ ಪೋಖ್ರಿಯಾಲ್ ನೇತೃತ್ವದಲ್ಲಿ 60 ಅಂಶಗಳ ಕ್ರಿಯಾ ಯೋಜನೆಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.
2020-23ರ ಶೈಕ್ಷಣಿಕ ಅಧಿವೇಶನದ ವೇಳೆಗೆ ಈ ನೂತನ ನೀತಿಯ ಸಾಧಕ ಭಾದಕಗಳ ಫಲಿತಾಂಶವನ್ನು ಕಂಡುಕೊಳ್ಳಲು ಮತ್ತು ಸಮರ್ಥವಾಗಿ ಜಾರಿಗೊಳಿಸಲು ಪೂರಕವಾಗುವಂತೆ ಈ 60 ಅಂಶಗಳ ಕ್ರಿಯಾ ಯೋಜನೆಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲಾ ರೀತಿಯ ಪ್ರವೇಶ ಪರೀಕ್ಷೆಗಳನ್ನು ಪರಿಶೀಲನೆ ಮಾಡುವ ಮತ್ತು ಎಚ್ಇಐ ಪ್ರಮಾಣಿತ ಪ್ರವೇಶ ಪರೀಕ್ಷೆಯನ್ನು ವಿನ್ಯಾಸಗೊಳಿಸುವ ಸಮಿತಿಯನ್ನು ನಿಯೋಜನೆ ಮಾಡುವ ಜವಾಬ್ದಾರಿಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಸಚಿವಾಲಯ ವಹಿಸಿದೆ. ಹಾಗೆಯೇ, 2022ರ ವೇಳೆಗೆ ಎಲ್ಲಾ ಹಂತಗಳಲ್ಲಿನ ಪರೀಕ್ಷಾ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲು ಸಿಬಿಎಸ್ಇ, ಎನ್ಐಒಎಸ್, ಎನ್ಸಿಇಆರ್ಟಿಗೆ ವಹಿಸಲಾಗಿದೆ. ಈ ಯೋಜನೆಯಂತೆ ಸಿಬಿಎಸ್ಇ ಮತ್ತು ಎನ್ಐಒಎಸ್ ಎರಡೂ ಸಂಸ್ಥೆಗಳು ಸಬ್ಜೆಕ್ಟಿವ್ ಮತ್ತು ಆಬ್ಜೆಕ್ಟಿವ್ ಎಂಬ ಎರಡೂ ರೀತಿಯ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಲಿವೆ.
ಸಚಿವಾಲಯವು ಎನ್ಸಿಇಆರ್ಟಿಗೆ ಗ್ರೇಡ್-1 ವಿದ್ಯಾರ್ಥಿಗಳ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಪ್ಲೇ ಬೇಸ್ಡ್ ಸ್ಕೂಲ್ ಪ್ರಿಪರೇಶನ್ ಮಾದರಿಗಳನ್ನು ತಯಾರಿಸುವ ಜವಾಬ್ದಾರಿ ನೀಡಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಹಿನ್ನಡೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಎಲ್ಲಾ ವರ್ಗಗಳ ಕಲಿಕಾ ಫಲಿತಾಂಶವನ್ನು ಉತ್ತಮಗೊಳಿಸುವಲ್ಲಿಯೂ ಎನ್ಸಿಇಆರ್ಟಿಗೆ ಜವಾಬ್ದಾರಿ ನೀಡಿದೆ.
ಇವಿಷ್ಟೇ ಅಲ್ಲದೆ ಶಿಕ್ಷಣ ಸಚಿವಾಲಯವು ಇನ್ನೂ ಅನೇಕ ಶಿಕ್ಷಣದ ಅಭಿವೃದ್ಧಿಗೆ ಪೂರಕವಾಗುವಂತೆ ಅಂಶಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಈ ಅಂಶಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರೂಪಿಸಲಾಗಿದೆ. ಈ ಅಂಶಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.