ಎತ್ತರದಲ್ಲಿರುವ ವಿಶ್ವದ ಅತೀ ಉದ್ದದ ಸುರಂಗ ಮಾರ್ಗ ಎಂದೇ ಖ್ಯಾತಿ ಪಡೆದಿರುವ ಮನಾಲಿ-ಲೇಹ್ ನಡುವೆ ಸಂಪರ್ಕ ಕಲ್ಪಿಸುವ ರೋಹ್ಟಂಗ್ನ ಅಟಲ್ ಸುರಂಗ ಮಾರ್ಗವನ್ನು ಇಂದು (ಅಕ್ಟೋಬರ್ 3) ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ.
ಈ ಸುರಂಗ ಮಾರ್ಗ ನಿರ್ಮಾಣ ಯೋಜನೆ ಮಾಜಿ ಪ್ರಧಾನಿ, ಅಜಾತ ಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯ ನಿರ್ಧಾರವಾಗಿದ್ದರಿಂದ ಈ ಟನಲ್ಗೆ ಅಟಲ್ ಜಿ ಹೆಸರನ್ನೇ ಇರಿಸಲಾಗಿದೆ. ಈ ಸುರಂಗ ನಿರ್ಮಾಣಕ್ಕೆ 20 ವರ್ಷಗಳ ಹಿಂದೆ ಅಂದರೆ 2000 ನೇ ಇಸವಿಯಲ್ಲಿ ಮಾನ್ಯ ಅಟಲ್ಜಿ ಅವರ ಸರ್ಕಾರ ಅನುಮೋದನೆ ನೀಡಿತ್ತು. ಬಳಿಕ 2002 ರಲ್ಲಿ ಇದಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು.
ಇದೀಗ ನರೇಂದ್ರ ಮೋದಿ ಅವರ ಅವಧಿಯಲ್ಲಿ ಈ ಸುರಂಗ ನಿರ್ಮಾಣ ಕಾರ್ಯ ಸಂಪೂರ್ಣವಾಗಿದ್ದು, ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಜೊತೆಗೆ ಈ ಸುರಂಗ ಮಾರ್ಗ ದೇಶಕ್ಕೆ ಸಂಬಂಧಿಸಿದಂತೆ ಹಲವು ದೃಷ್ಟಿಕೋನಗಳಿಂದ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದು ತಜ್ಞರ ಅಭಿಪ್ರಾಯ.
ಈ ಮಹತ್ವದ ಅಟಲ್ ಸುರಂಗದ ಬಗ್ಗೆ ಒಂದಷ್ಟು ಮಾಹಿತಿ:
🔷 ಈ ಸುರಂಗ ಮಾರ್ಗವು ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ನಿಂದ ನಿರ್ಮಾಣವಾಗಿದ್ದು, 9.02 ಕಿಮೀ ಉದ್ದವಾಗಿದೆ. ಇದು ವಿಶ್ವದ ಅತೀ ಉದ್ದ ಸುರಂಗ ಮಾರ್ಗ ಎಂಬ ಕೀರ್ತಿಗೂ ಭಾಜನವಾಗಿದೆ.
🔷 ಈ ಸುರಂಗದ ಮೂಲಕ 46 ಕಿಮೀ ಇರುವ ಮನಾಲಿ- ಲೇಕ್ ಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 4-5 ಗಂಟೆಗಳ ಕಾಲ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ.
🔷 ಈ ಸುರಂಗ ಮಾರ್ಗ ಸರ್ವ ಋತುಗಳಲ್ಲಿಯೂ ಪ್ರಯಾಣಕ್ಕೆ ಅವಕಾಶ ಒದಗಿಸಲಿದೆ. ಇದಕ್ಕೂ ಮುನ್ನ ಲಹೌಲ್-ಸ್ಪಿಟಿ ಕಣಿವೆಗಳು ಚಳಿಗಾಲದ ಆರು ತಿಂಗಳುಗಳ ಕಾಲ ಮಂಜಿನಿಂದ ತುಂಬಿರುತ್ತಿದ್ದು, ಇಲ್ಲಿ ಸಂಚಾರ ನಡೆಸುವುದು ಅಸಾಧ್ಯ ಎಂಬ ಸ್ಥಿತಿ ಇತ್ತು. ಈ ಸಮಸ್ಯೆಗೂ ಸದ್ಯ ಅಟಲ್ ಸುರಂಗ ಪರಿಹಾರವನ್ನು ಒದಗಿಸಿದೆ.
🔷 ಈ ಸುರಂಗದಲ್ಲಿ ದಿನಕ್ಕೆ 3,000 ನಾಲ್ಕು ಚಕ್ರದ ವಾಹನಗಳು ಮತ್ತು 1,500 ರಷ್ಟು ಟ್ರಕ್ಗಳು ಗಂಟೆಗೆ 80 ಕಿಮೀ ವೇಗದಲ್ಲಿ ಸಂಚರಿಸಬಹುದಾಗಿದೆ.
🔷 ಈ ಸುರಂಗ ಮಾರ್ಗವು ಸೆಮಿ ಟ್ರಾನ್ಸ್ವರ್ಸ್ ವೆಂಟಿಲೇಷನ್ ಸಿಸ್ಟಂ, ಎಸ್ಸಿಎಡಿಎ ನಿಯಂತ್ರಿತ ಅಗ್ನಿಶಾಮಕ ವ್ಯವಸ್ಥೆ, ಇಲ್ಯುಮಿನೇಷನ್ ವ್ಯವಸ್ಥೆ ಮತ್ತು ಮಾನಿಟರಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಜೊತೆಗೆ ಅತ್ಯಾಧುನಿಕ ಎಲೆಕ್ಟ್ರೋಮೆಕ್ಯಾನಿಕಲ್ ವ್ಯವಸ್ಥೆಯೂ ಈ ಸುರಂಗ ಮಾರ್ಗದಲ್ಲಿದೆ.
🔷 ಅಟಲ್ ಸುರಂಗವು ಹಿಮಾಲಯದ ಪಿರ್ ಪಾಂಜಾಲ್ ಶ್ರೇಣಿಯ ರೋಹ್ಟಾಂಗ್ ಪಾಸ್ನಲ್ಲಿ ಸಮುದ್ರ ಮಟ್ಟದಿಂದ ಸುಮಾರು ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಇದನ್ನು ಆಲ್ಟ್ರಾ ಮಾಡರ್ನ್ ವಿಶೇಷತೆಗಳನ್ನೊಳಗೊಂಡಂತೆ ಇದನ್ನು ನಿರ್ಮಾಣ ಮಾಡಲಾಗಿದೆ.
🔷 ಈ ಸುರಂಗ ಹಾರ್ಸ್ ಶೂ ಆಕಾರದಲ್ಲಿದೆ. ಇದು ಸಿಂಗಲ್ ಟ್ಯೂಬ್, ಡಬಲ್ ಲೇನ್ ಸುರಂಗವಾಗಿದ್ದು 8 ಮೀ. ರಸ್ತೆ ಮಾರ್ಗವನ್ನು ಒಳಗೊಂಡಿದೆ. ಇದು 5.525 ಮೀ, 10.5 ಮೀ. ಅಗಲದ ಓವರ್ಹೆಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಮಾರ್ಗದಲ್ಲಿ 3.6×2.25 ಮೀ. ಅಗ್ನಿ ನಿರೋಧಕ ತುರ್ತು ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಮುಖ್ಯ ಸುರಂಗದೊಳಗೆ ಮತ್ತೊಂದು ತುರ್ತು ಸುರಂಗವನ್ನು ಹೊಂದಿದ ದೇಶದ ಮೊಟ್ಟ ಮೊದಲ ಸುರಂಗ ಮಾರ್ಗ ಇದಾಗಿದೆ.
🔷 ಸುರಂಗ ಮಾರ್ಗದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇದರ ಉತ್ತರ ಮತ್ತು ದಕ್ಷಿಣ ತುದಿಗಳ ಪ್ರವೇಶ ದ್ವಾರಗಳಲ್ಲಿ ಮುನ್ನೆಚ್ಚರಿಕೆಗಳನ್ನು ಒಳಗೊಂಡಿದೆ. ಸುರಂಗದ ಪ್ರತಿ 150 ಮೀ. ಗೆ ದೂರವಾಣಿ ಸಂಪರ್ಕ, ಪ್ರತಿ 60 ಮೀ. ಗೆ ಅಗ್ನಿಶಾಮಕ ವ್ಯವಸ್ಥೆ ಅಳವಡಿಸಲಾಗಿದೆ. ಪ್ರತಿ ಕಿ.ಮೀ. ಗೆ ಗಾಳಿಯ ಗುಣಮಟ್ಟ ಪರಿಶೀಲನೆ, ಇವಾಕ್ಯುವೇಶನ್ ಲೈಟ್ಗಳ ವ್ಯವಸ್ಥೆ, ಪ್ರತಿ 25 ಮೀ. ಗೆ ಎಕ್ಸಿಟ್ ಚಿಹ್ನೆಗಳು, ಪ್ರತಿ 500 ಮೀ.ಗೆ ತುರ್ತು ನಿರ್ಗಮನ, ಪ್ರತಿ 250 ಮೀ. ಗೆ ಸಿಸಿಟಿವಿ ವ್ಯವಸ್ಥೆ, ಬ್ರಾಡ್ಕಾಸ್ಟಿಂಗ್ ವ್ಯವಸ್ಥೆ, ಅಟೋಮೆಟಿಕ್ ಇನ್ಸಿಡೆಂಟ್ ಡಿಟೆಕ್ಷನ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
🔷 ವರ್ಷದುದ್ದಕ್ಕೂ ಈ ಸುರಂಗ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ನ ಪ್ರದೇಶಗಳ ಜೊತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ನಿರ್ಣಾಯಕ ಪಾತ್ರ ವಹಿಸಲಿದೆ.
🔷 ಹವಾಮಾನ, ಭೂ ಪ್ರದೇಶಗಳು, ಭೌಗೋಳಿಕ ನಿರ್ಬಂಧಗಳು ಸೇರಿದಂತೆ ಇನ್ನೂ ಅನೇಕ ಸವಾಲುಗಳನ್ನು ಎದುರಿಸಿ ಜಯಿಸಿ ಕೇಂದ್ರ ಸರ್ಕಾರ ಈ ಅಟಲ್ ಟನಲ್ ಅನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿದೆ.
ಸುಮಾರು 3000 ಕೋಟಿ ರೂ. ಗಳ ವೆಚ್ಚದಲ್ಲಿ ದೇಶದ ಮಹತ್ವಾಕಾಂಕ್ಷೆಯ ಅಟಲ್ ಸುರಂಗ ಯೋಜನೆ ಇದೀಗ ಯಶಸ್ವಿಯಾಗಿ, ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.