ಚಾಮರಾಜನಗರ: ನಗರದ ದೀನಬಂಧು ಸಂಸ್ಥೆಯು ಪಿವಿಸಿ ಪೈಪ್ಗಳನ್ನು ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ದೂರದರ್ಶಕಗಳನ್ನು ತಯಾರಿಸಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದ 200 ಶಾಲೆಗಳಿಗೆ ಇದನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಈ ಉಪಕರಣವು ಕೆಪ್ಲೇರಿಯನ್ ಮಾದರಿಯಲ್ಲಿದ್ದು, ರಿಫ್ರಾಕ್ಷನ್ ಟೆಲಿಸ್ಕೋಪ್ ತಯಾರಿಗೆ ಸುಮಾರು 500 ರೂ. ಗಳನ್ನು ವೆಚ್ಚ ಮಾಡಿದೆ. ಇದು ಒಂದು ವಸ್ತುವನ್ನು ಇರುವುದಕ್ಕಿಂತ 30 ಪಟ್ಟು ದೊಡ್ಡದಾಗಿ ತೋರಿಸುವ ಸಾಮರ್ಥ್ಯ ಹೊಂದಿದೆ. ಸಂಸ್ಥೆಯ ಶಿಕ್ಷಕರ ಸಂಪನ್ಮೂಲ ಕೇಂದ್ರದ ಸಿಬ್ಬಂದಿ ಈ ಉಪಕರಣವನ್ನು ತಯಾರಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಸಂಪನ್ಮೂಲ ವ್ಯಕ್ತಿ ಭರತ್, ಗುರುಗ್ರಹ ಸೇರಿದಂತೆ ಕೆಲವು ಉಪಗ್ರಹಗಳನ್ನು ಇದನ್ನು ಬಳಸಿ ಗುರುತಿಸಿದ್ದೇವೆ. ಶನಿ ಗ್ರಹದ ಉಂಗುರವೂ ಕಾಣುತ್ತದೆ. ಇದೇ ಸಾಮರ್ಥ್ಯ ಹೊಂದಿದ ದೂರದರ್ಶಕಕ್ಕೆ ಮಾರುಕಟ್ಟೆಯಲ್ಲಿ 6 ಸಾವಿರದಿಂದ 7 ಸಾವಿರ ಮೌಲ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಪಿವಿಸಿ ಪೈಪ್ ಬಳಸಿ ತಯಾರಿಸಲಾಗಿದೆ. ಎರಡು ಮಸೂರಗಳನ್ನು ಮಾತ್ರವೇ ಹೊರಗಿನಿಂದ ತರಿಸಲಾಗಿದೆ. ಫ್ಲೈವುಡ್ ಬಳಸಿ ಸ್ಟ್ಯಾಂಡ್ ತಯಾರಿಸಲಾಗಿದೆ. ಬೆಳಕಿನ ಪ್ರತಿಫಲನ ತಡೆಗೆ ಒಳಭಾಗದಲ್ಲಿ ಕಪ್ಪು ಶೀಟ್ಗಳನ್ನು ಹಚ್ಚಲಾಗಿದೆ. ಇದನ್ನು ಬಿಚ್ಚಿ ಜೋಡಿಸಲು ಸಾಧ್ಯವಿದೆ ಎಂದೂ ತಯಾರಕರು ಮಾಹಿತಿ ನೀಡಿದ್ದಾರೆ.
ಸಂಸ್ಥೆ ಪ್ರತಿ ವರ್ಷದಂತೆ ಈ ಬಾರಿಯೂ 200 ಗಣಿತ, ವಿಜ್ಞಾನ ಶಿಕ್ಷಕರ ಕಾರ್ಯಾಗಾರ ನಡೆಸಲಿದ್ದು ಈ ಸಂದರ್ಭದಲ್ಲಿ ಈ ದೂರದರ್ಶಕ ತಯಾರಿಕೆಯ ಮಾಹಿತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಒಂದು ಬ್ಯಾಚ್ನಲ್ಲಿ 25 ಶಿಕ್ಷಕರು ಭಾಗವಹಿಸಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಗೂಗಲ್ ಮೀಟ್ ಮೂಲಕ ಈ ಕಾರ್ಯಾಗಾರ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಇದರಿಂದ ಶಿಕ್ಷಕರು ಮತ್ತು ಮಕ್ಕಳಿಗೂ ಅನುಕೂಲವಾಗಲಿದೆ ಎಂದು ಸಂಸ್ಥೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.