ಬೆಳಗಾವಿ: ಕೊರೋನಾ ಸೋಂಕು ಆರಂಭವಾದ ಬಳಿಕ ಸ್ವಚ್ಛತೆಗೆ ಸಂಬಂಧಿಸಿದಂತೆಯೂ ದೇಶದೆಲ್ಲೆಡೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಬೆಳಗಾವಿಯ ಭೂತರಾಮನ ಹಟ್ಟಿ ಕನ್ನಡ ಮಾ.ಹಿ.ಪ್ರಾ. ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಆ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ.
ಈ ಆಧುನಿಕ ಶೌಚಾಲಯವನ್ನು ಶಾಲೆಗೆ ಕುಲಗೋಡದ ವೈದ್ಯ ದಂಪತಿ ‘ರಾಜಲಕ್ಷ್ಮೀ ಪ್ರತಿಷ್ಠಾನ’ ದ ಮೂಲಕ ಕೊಡುಗೆ ನೀಡಿದ್ದಾರೆ. ಕೊರೋನಾ ಲಾಕ್ಡೌನ್ಗೂ ಮೊದಲೇ ಈ ರೀತಿಯ ಆಧುನಿಕ ಶೌಚಾಲಯ ನಿರ್ಮಾಣ ಕಾರ್ಯ ಆರಂಭ ಮಾಡಲು ಕೆಲಸ ಆರಂಭಿಸಲಾಗಿತ್ತು. ಈ ಕಾಮಗಾರಿ ಇದೀಗ ಸಂಪೂರ್ಣಗೊಂಡಿದೆ. ಸುಮಾರು 7.5 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿರುವ ಈ ಶೌಚಾಲಯ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆಯೂ ಸುಸಜ್ಜಿತವಾಗಿದೆ. ಅಲ್ಲದೆ ಸಮೀಪದಲ್ಲಿಯೇ ಕೊಳವೆ ಬಾವಿಯೂ ಇದ್ದು, ಟ್ಯಾಂಕ್ ಮೂಲಕವೂ ಇಲ್ಲಿಗೆ ನೀರಿನ ಪೂರೈಕೆ ನಡೆಯುತ್ತಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಶುಚಿತ್ವದ ಪಾಠವನ್ನು ಪ್ರಾಯೋಗಿಕವಾಗಿಯೇ ತಿಳಿಸಿ ಹೇಳುವ ಕೆಲಸವನ್ನು ಶಾಲೆ ಮಾಡುತ್ತಿದೆ. ಜೊತೆಗೆ ಇತರ ಶಾಲೆಗಳಿಗೂ ಇದು ಮಾದರಿಯಾಗಿದೆ ಎಂದೇ ಹೇಳಬಹುದಾಗಿದೆ.
ಈ ಶಾಲೆಯಲ್ಲಿ ಹಿಂದೆ ಇದ್ದ ಶೌಚಾಲಯ ಹಳೆಯದಾಗಿತ್ತು. ಮಕ್ಕಳ ಸಂಖ್ಯೆಯೂ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ಈಗ ಹೊಸ ಆಧುನಿಕ ವ್ಯವಸ್ಥೆಗಳುಳ್ಳ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ವಿಚಾರ ಡಾ. ಶಶಿಕಾಂತ ದಂಪತಿಗಳ ಗಮನಕ್ಕೆ ಬಂದ ಕೂಡಲೇ ಹೊಸ ಶೌಚಾಲಯ ನಿರ್ಮಾಣ ಮಾಡಲು ನೆರವು ನೀಡಿದ್ದಾರೆ. ಜೊತೆಗೆ ಬಾಲಕಿಯರ ಶೌಚಾಲಯದಲ್ಲಿ ನ್ಯಾಪ್ಕಿನ್ ಸುಡುವ ಯಂತ್ರವನ್ನು ಸರ್ಕಾರದ ವತಿಯಿಂದ ಅಳವಡಿಸಲಾಗಿದೆ. ಜೊತೆಗೆ ಪ್ರತಿಷ್ಠಾನದ ವತಿಯಿಂದ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೂ ನೆರವು ನೀಡಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.