ನವದೆಹಲಿ: ನೀತಿ ಆಯೋಗ ಬುಧವಾರ ಬಿಡುಗಡೆ ಮಾಡಿರುವ ‘ರಫ್ತು ಸಿದ್ಧತೆ ಸೂಚ್ಯಂಕ 2020’ ರಲ್ಲಿ ಗುಜರಾತ್ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದ್ದು ನಂತರದಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡುಗಳು ಸ್ಥಾನ ಪಡೆದಿವೆ.
ರಫ್ತು ಮಾಡಲು ಅಗತ್ಯವಿರುವ ವ್ಯವಸ್ಥೆ, ಮೂಲ ಸೌಕರ್ಯಗಳ ಆಧಾರದಲ್ಲಿ ಈ ಸೂಚ್ಯಂಕವನ್ನು ನಿರ್ಧರಿಸಲಾಗಿದೆ. ದೇಶದಲ್ಲಿ ಕರಾವಳಿ ಪ್ರದೇಶವನ್ನು ಹೊಂದಿರುವ ಆರು ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ, ಕೇರಳಗಳು ಮೊದಲ ಹತ್ತು ಸ್ಥಾನಗಳಲ್ಲಿ ಪಾಲು ಪಡೆದಿವೆ. ಈ ಸೂಚ್ಯಂಕ ರಫ್ತು ವಹಿವಾಟು ನಡೆಸುವಾಗ ಎದುರಾಗುವ ಸವಾಲುಗಳು ಮತ್ತು ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳನ್ನು ಗುರುತಿಸುವ ಉದ್ದೇಶ ಹೊಂದಿದೆ. ದೇಶದ 100% ರಫ್ತಿನಲ್ಲಿ 70% ಪಾಲು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳದ್ದಾಗಿದೆ ಎಂಬ ಅಂಶವನ್ನು ಈ ಸೂಚ್ಯಂಕದಲ್ಲಿ ತಿಳಿಸಲಾಗಿದೆ.
ದೇಶದ 15 ರಾಜ್ಯಗಳಷ್ಟೇ ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಆನ್ಲೈನ್ ಪೋರ್ಟಲ್ ಮೂಲಕ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದೆ. ಈ ವಿಚಾರದಲ್ಲಿ ದೇಶದ ಹಲವು ರಾಜ್ಯಗಳು ಇನ್ನೂ ಹಿಂದುಳಿದಿದೆ ಎಂಬ ಅಂಶವನ್ನೂ ಇದು ಉಲ್ಲೇಖಿಸಿದೆ.
ಈ ವರದಿಯನ್ನು ಬಿಡುಗಡೆ ಮಾಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಜಾಗತಿಕ ವ್ಯವಹಾರಗಳಲ್ಲಿ ಭಾರತದ ಪಾಲು ಹೆಚ್ಚಬೇಕಾದರೆ ದೇಶದಿಂದಾಗುವ ರಫ್ತಿನ ಪ್ರಮಾಣ ಹೆಚ್ಚಬೇಕು. ಆತ್ಮ ನಿರ್ಭರ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿಯೂ ರಫ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ದೇಶದಿಂದಾಗುವ ರಫ್ತಿನ ಪ್ರಮಾಣ ಹೆಚ್ಚಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.