ನವದೆಹಲಿ: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ ಜೆಇಇ-ಮೇನ್ಸ್ ಮತ್ತು ನೀಟ್ ಅನ್ನು ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜಿ ಮಾಡಿಕೊಂಡಂತೆ ಆಗುತ್ತದೆ ಎಂದು ಭಾರತ ಮತ್ತು ವಿದೇಶದ ವಿವಿಧ ವಿಶ್ವವಿದ್ಯಾಲಯಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ನಲ್ಲಿ ಈ ಪರೀಕ್ಷೆಗಳನ್ನು ನಡೆಸುವುದನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ಆದರೆ ಶಿಕ್ಷಣ ತಜ್ಞರು ತಮ್ಮ ಪತ್ರದಲ್ಲಿ, “ಕೆಲವರು ತಮ್ಮದೇ ರಾಜಕೀಯ ಅಜೆಂಡಾಗಾಗಿ ಪರೀಕ್ಷೆ ಮುಂದೂಡಲು ಒತ್ತಡ ಹೇರುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಯುವಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯ. ಆದರೆ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅವರ ವೃತ್ತಿಜೀವನದ ಮೇಲೆ ಅನಿಶ್ಚಿತತೆಯ ಕರಿ ನೆರಳು ಮೂಡಿದೆ. ಪ್ರವೇಶಾತಿ ಮತ್ತು ತರಗತಿಗಳ ಬಗ್ಗೆ ಸಾಕಷ್ಟು ಆತಂಕಗಳಿವೆ, ಅದನ್ನು ಶೀಘ್ರದಲ್ಲಿಯೇ ಪರಿಹರಿಸಬೇಕಾಗಿದೆ” ಎಂದು ತಜ್ಞರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಪ್ರತಿ ವರ್ಷದಂತೆ, ಈ ವರ್ಷವೂ ಸಹ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಈಗ ಮುಂದಿನ ಹಂತವನ್ನು ತಲುಪಲು ಮನೆಯಲ್ಲಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ಜೆಇಇ-ಮೇನ್ಸ್ ಮತ್ತು ನೀಟ್ ದಿನಾಂಕಗಳನ್ನು ಸರ್ಕಾರ ಘೋಷಿಸಿದೆ. ಪರೀಕ್ಷೆಗಳನ್ನು ನಡೆಸಲು ಯಾವುದೇ ವಿಳಂಬವಾಗುವುದರಿಂದ ವಿದ್ಯಾರ್ಥಿಗಳ ಅಮೂಲ್ಯವಾದ ವರ್ಷ ವ್ಯರ್ಥವಾಗುತ್ತದೆ. ನಮ್ಮ ಯುವಜನರು ಮತ್ತು ವಿದ್ಯಾರ್ಥಿಗಳ ಕನಸುಗಳು ಮತ್ತು ಭವಿಷ್ಯದೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಆದರೂ, ಕೆಲವರು ನಮ್ಮ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಕೀಯಕ್ಕಾಗಿ ಸರ್ಕಾರವನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದಾರೆ “ಎಂದು ಅದು ಹೇಳಿದ್ದಾರೆ.
ಸಹಿ ಮಾಡಿದವರಲ್ಲಿ ದೆಹಲಿ ವಿಶ್ವವಿದ್ಯಾಲಯ, ಇಗ್ನೋ, ಲಕ್ನೋ ವಿಶ್ವವಿದ್ಯಾಲಯ, ಜೆಎನ್ಯು, ಬಿಎಚ್ಯು, ಐಐಟಿ ದೆಹಲಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ಭಾರತೀಯ ಶಿಕ್ಷಣ ತಜ್ಞರು, ಲಂಡನ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ದಿ ಹೀಬ್ರೂ ಯೂನಿವರ್ಸಿಟಿ ಆಫ್ ಜೆರುಸಲೆಮ್ ಮತ್ತು ಇಸ್ರೇಲ್ನ ಬೆನ್ ಗುರಿಯನ್ ವಿಶ್ವವಿದ್ಯಾಲಯಗಳ ತಜ್ಞರು ಕೂಡ ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.