ನವದೆಹಲಿ: ಟಿವಿ ಶೋಗಳು, ಸಿನೆಮಾ, ಧಾರಾವಾಹಿ ಮೊದಲಾದಂತೆ ಇನ್ನಿತರ ಚಿತ್ರೀಕರಣಗಳನ್ನು ನಡೆಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಲೇ ಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಕೊರೋನಾ ಸಂಕಷ್ಟದ ಅವಧಿಯಲ್ಲಿ ಚಿತ್ರೀಕರಣಗಳು ಸ್ಥಗಿತಗೊಂಡಿದ್ದು, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಚಿತ್ರೋದ್ಯಮದ ಕೆಲಸಗಾರರು ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಗಳೆರಡರ ಜೊತೆಗೆ ಸಮಾಲೋಚನೆ ನಡೆಸಿ, ಹೊಸ ಮಾರ್ಗಸೂಚಿಗಳ ಜೊತೆಗೆ ಮತ್ತೆ ಚಿತ್ರೀಕರಣಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಹೊಸ ಮಾರ್ಗಸೂಚಿಯನ್ವಯ ಚಿತ್ರೀಕರಣದ ಸ್ಥಳದಲ್ಲಿ ಕಡ್ಡಾಯವಾಗಿ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳನ್ನು ಅಳವಡಿಸಬೇಕು. ಜೊತೆಗೆ ಸೂಚಿಸಲಾದ ಮಾರ್ಗಗಳನ್ನೇ ಅನುಸರಿಸಬೇಕು ಎಂದು ತಿಳಿಸಲಾಗಿದೆ. ಚಿತ್ರೀಕರಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಚಿತ್ರೀಕರಣದ ಸ್ಥಳಕ್ಕೆ ಆಗಮಿಸುವ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ. ಕೊರೋನಾ ಲಕ್ಷಣಗಳಿಲ್ಲದವರಿಗೆ ಮಾತ್ರ ಸ್ಥಳದಲ್ಲಿರಲು ಅವಕಾಶ. ಚಿತ್ರೀಕರಣದ ಸಂದರ್ಭದಲ್ಲಿ ಹಾಜರಿರುವ ಪ್ರತಿಯೊಬ್ಬರು ಆಗಿಂದಾಗ್ಗೆ ಸಾಬೂನು ಬಳಸಿ ಕಡ್ಡಾಯವಾಗಿ ಕೈ ತೊಳೆಯಬೇಕು. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ. ಅಭಿನಯ ಮಾಡುವವರಿಗೆ ದೃಶ್ಯ ಚಿತ್ರೀಕರಿಸುವ ಸಂದರ್ಭದಲ್ಲಿ ರಿಯಾಯಿತಿ ನೀಡಲಾಗಿದೆ.
ವೃದ್ಧರು, ಗರ್ಭಿಣಿಯರು, ಕಾಯಿಲೆ ಇರುವವರನ್ನು ಸಾರ್ವಜನಿಕ ಸಂಪರ್ಕಕ್ಕೆ ಬರದಂತೆ ತಡೆಯಬೇಕು. ಚಿತ್ರೀಕರಣದ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಕಡ್ಡಾಯ. ಚಿತ್ರೀಕರಣದಲ್ಲಿ ಭಾಗಿಯಾದವರಿಗೆ ಕೊರೋನಾ ಲಕ್ಷಣಗಳು ಕಂಡುಬಂದರೆ ಅವರಿಗಾಗಿ ಪ್ರತ್ಯೇಕ ತಾತ್ಕಾಲಿಕ ಐಸೋಲೇಷನ್ ವ್ಯವಸ್ಥೆ ಕಡ್ಡಾಯ ಎಂಬುದಾಗಿ ಕೇಂದ್ರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ಎಲ್ಲ ಕ್ರಮಗಳನ್ನನುಸರಿಸಿ ಚಿತ್ರೀಕರಣ ನಡೆಸಬೇಕು ಎಂದು ಆದೇಶವನ್ನು ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.