ನವದೆಹಲಿ: ಕೊರೋನಾ ವಿರುದ್ಧ ಅಭಿವೃದ್ಧಿ ಮಾಡಲಾಗಿರುವ ಲಸಿಕೆ ಸ್ಪುಟ್ನಿಕ್-5 ತಯಾರಿಕೆಗಾಗಿ ರಷ್ಯಾ ದೇಶವು ಭಾರತದ ಜೊತೆಗೆ ಕೈಜೋಡಿಸಲು ಬಯಸುತ್ತಿರುವುದಾಗಿ ರಷ್ಯಾ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಿಲ್ ಡಿಮೆಟ್ರಿವ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೋವಿಡ್-19 ವಿರುದ್ಧ ತಮ್ಮ ದೇಶದಲ್ಲಿ ಪರಿಣಾಮಕಾರಿ ಲಸಿಕೆಯೊಂದನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದರು. ಈ ಲಸಿಕೆ ಮಾನವನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದೂ ಅವರು ಭರವಸೆಯನ್ನು ನೀಡಿದ್ದರು. ಗಮೇಲಿಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ, ಮೈಕ್ರೋಬಯಾಲಜಿ ಮತ್ತು ಆರ್ಡಿಐಎಫ್ ಗಳ ಜಂಟಿ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿದೆ. ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಮಾನವರ ಮೇಲೆ ಇನ್ನಷ್ಟೇ ನಡೆಯಬೇಕಿದೆ.
ಈ ಲಸಿಕೆಯನ್ನು ತಯಾರಿಸಲು ಈಗಾಗಲೇ ಲ್ಯಾಟಿನ್ ಅಮೆರಿಕ, ಏಷ್ಯಾ, ಮಧ್ಯ ಪ್ರಾಚ್ಯದ ದೇಶಗಳು ಮುಂದೆ ಬಂದಿವೆ. ಇದನ್ನು ತಯಾರಿಸಲು ಭಾರತದ ಸಹಭಾಗಿತ್ವ ಸಾಧ್ಯವಾಗುತ್ತದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಮೆಟ್ರಿವ್ ಮಾಹಿತಿ ನೀಡಿದ್ದಾರೆ. ಏಕೆಂದರೆ ಇದೊಂದು ಪರಿಣಾಮಕಾರಿ ಲಸಿಕೆಯಾಗಿದ್ದು, ಇದನ್ನು ತಯಾರಿಸಲು ಭಾರತಕ್ಕೆ ಸಾಮರ್ಥ್ಯ ಇರುವುದಾಗಿ ರಷ್ಯಾ ನಂಬಿದೆ ಎಂದು ಅವರು ಹೇಳಿದ್ದಾರೆ. ಸದ್ಯದ ಬೇಡಿಕೆಯ ಈಡೇರಿಕೆಗೆ ಈ ಸಹಭಾಗಿತ್ವ ಪೂರಕವಾಗಿ ಕೆಲಸ ಮಾಡುವ ಸಾಧ್ಯತೆ ಇರುವುದಾಗಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಔಷಧದ ಕ್ಲಿನಿಕಲ್ ಟ್ರಯಲ್ ಅನ್ನು ರಷ್ಯಾ , ಭಾರತ , ಅರಬ್ ರಾಷ್ಟ್ರಗಳು, ಬ್ರೆಜಿಲ್ ಮೊದಲಾದೆಡೆಗಳಲ್ಲಿಯೂ ನಡೆಸಲು ರಷ್ಯಾ ಉದ್ದೇಶಿಸಿದೆ. ವಿಶ್ವದ ಐದಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಲಸಿಕೆಗಳನ್ನು ತಯಾರಿಸುವ ಇರಾದೆಯನ್ನು ರಷ್ಯಾ ವ್ಯಕ್ತಪಡಿಸಿದೆ. ಜಗತ್ತಿನ ಅನೇಕ ದೇಶಗಳಿಂದ ಈ ಲಸಿಕೆಗೆ ಬೇಡಿಕೆ ಇದೆ ಎಂದೂ ರಷ್ಯಾ ಮಾಹಿತಿ ನೀಡಿದೆ. ರಷ್ಯಾದ ಈ ಲಸಿಕೆಯ ಪ್ರಯೋಗಕ್ಕೆ ಭಾರತದಿಂದಲೂ ಕ್ಲಿನಿಕಲ್ ಟ್ರಯಲ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.