ನವದೆಹಲಿ: ಭಾರತವೂ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಇಂದು ಗೂಗಲ್ನ ಜಿಮೇಲ್ ಸರ್ವೀಸ್ನಲ್ಲಿ ಕೆಲ ಕ್ಷಣ ವ್ಯತ್ಯಯ ಕಂಡುಬಂದಿದ್ದು, ಬಳಕೆದಾರರು ಪರದಾಡುವಂತಾಯಿತು. ಈ ಸಮಸ್ಯೆಯ ಬಗ್ಗೆ ಗೂಗಲ್ಗೆ ಈಗಾಗಲೇ ಸಹಸ್ರಾರು ದೂರುಗಳನ್ನೂ ಬಳಕೆದಾರರು ದಾಖಲು ಮಾಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಗೂಗಲ್, ಜಿಮೇಲ್ ಸೇವೆ ಡೌನ್ ಆಗಿರುವುದಾಗಿ ತಿಳಿಸಿದೆ. ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಆದಷ್ಟು ಬೇಗ ಈ ಸಮಸ್ಯೆಯನ್ನು ಸರಿಪಡಿಸುವುದಾಗಿಯೂ ತಿಳಿಸಿತ್ತು. ಅಲ್ಲದೆ ವಿಶ್ವದ ಅನೇಕ ಮಂದಿ ಜಿಮೇಲ್ ಬಳಕೆದಾರರು ಈ ಸಮಸ್ಯೆಗೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆಗೆ ದೂರುಗಳನ್ನು ನೀಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಏಷ್ಯಾ, ಅಮೇರಿಕಾ ಮತ್ತು ಯುರೋಪ್ ಖಂಡದ ಹಲವು ರಾಷ್ಟ್ರಗಳ ಜಿಮೇಲ್ ಬಳಕೆದಾರರಿಗೆ ಸಂದೇಶಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಗೂಗಲ್ ಡ್ರೈವ್ ನಲ್ಲಿಯೂ ಸಮಸ್ಯೆ ಉದ್ಭವವಾಗಿದ್ದು ಅಗತ್ಯ ವಿಚಾರಗಳನ್ನು ಡೌನ್ಲೋಡ್ ಮಾಡುವುದು, ಮಾಹಿತಿ ಪಡೆದುಕೊಳ್ಳುವುದು ಇತ್ಯಾದಿಗಳಿಗೂ ತೊಡಕುಂಟಾಗಿತ್ತು ಎಂದು ತಿಳಿದು ಬಂದಿದೆ. ಭಾರತದಲ್ಲಿಯೂ 11 ಗಂಟೆಯಿಂದ ತೊಡಗಿದಂತೆ ಈ ಸಮಸ್ಯೆ ಎದುರಾಗಿದ್ದು, ಸಂದೇಶ ಕಳುಹಿಸಲು, ಮಾಹಿತಿ ವಿನಿಮಯಕ್ಕೂ ಸಮಸ್ಯೆಯಾಗಿತ್ತು ಎಂದು ಸಂತ್ರಸ್ಥ ಬಳಕೆದಾರರು ತಿಳಿಸಿದ್ದಾರೆ.
ಇನ್ನು ಜಿಮೇಲ್ನಲ್ಲಿ ಸಮಸ್ಯೆಯಾಗಿರುವ ಬಗ್ಗೆ ಗೂಗಲ್ ಜಿಸ್ಯೂಟ್ ಡ್ಯಾಶ್ಬೋರ್ಡ್ನಲ್ಲಿಯೂ ಪ್ರಕಟಿಸಿದೆ. ಸಮಸ್ಯೆಯ ಮೂಲವನ್ನು ತಿಳಿದು ಪರಿಹಾರ ಕಂಡುಹುಡುಕಲು ತಂತ್ರಜ್ಞರು ಪ್ರಯತ್ನ ನಡೆಸುತ್ತಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಿ ಬಳಕೆದಾರರಿಗೆ ಅನುಕೂಲ ಮಾಡಿಕೊಡುವ ಭರವಸೆಯನ್ನೂ ಸಂಸ್ಥೆ ನೀಡಿತ್ತು. ಅದರಂತೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಜಿಮೇಲೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.