ನವದೆಹಲಿ: ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ರೈಲ್ವೆ ಸಚಿವಾಲಯ, ಈ ಸಂಬಂಧ ಒಪ್ಪಂದದ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿದೆ.
ಈ ಪ್ರತಿಯಲ್ಲಿ ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಖಾಸಗಿ ರೈಲುಗಳಿಗೆ ತಾವು ನಿರ್ವಹಿಸುವ ರೈಲುಗಳನ್ನು ಯಾವ ನಿಲ್ದಾಣದಲ್ಲಿ ನಿಲ್ಲಿಸಬೇಕೆಂಬುದನ್ನು ನಿರ್ಧರಿಸುವ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಾಗಿದೆ. ನಿಲ್ದಾಣಗಳ ಪಟ್ಟಿಯನ್ನು ಸಿದ್ಧಪಡಿಸಿ ಅದನ್ನು ಸಾಕಷ್ಟು ಮುಂಚಿತವಾಗಿಯೇ ಸಚಿವಾಲಯದ ಮುಂದಿಡುವಂತೆಯೂ ತಿಳಿಸಲಾಗಿದೆ.
ಖಾಸಗಿ ರೈಲುಗಳ ಓಡಾಟಕ್ಕೆ ಸಚಿವಾಲಯದ ಒಪ್ಪಂದಕ್ಕೆ ಒಳಪಟ್ಟಿರುವ ಸಂಸ್ಥೆಗಳು ರೈಲು ನಿಲ್ದಾಣವನ್ನು ಪ್ರವೇಶಿಸುವ ಸಮಯ, ಅಲ್ಲಿಂದ ಹೊರಡುವ ಸಮಯವನ್ನೂ ಮುಂಚಿತವಾಗಿಯೇ ಸಚಿವಾಲಯಕ್ಕೆ ತಿಳಿಸಬೇಕೆಂದು ಸೂಚಿಸಲಾಗಿದೆ. ಕನಿಷ್ಟ ಒಂದು ವರ್ಷಗಳ ವರೆಗೆ ಒಮ್ಮೆ ಸಚಿವಾಲಯಕ್ಕೆ ತಿಳಿಸಿ ಅಂತಿಮಗೊಳಿಸಲಾದ ಯಾವುದೇ ನಿರ್ಧಾರವನ್ನು ಬದಲಾಯಿಸಲು ಅಥವಾ ಪರಿಷ್ಕರಿಸಲು ಅವಕಾಶವಿಲ್ಲ ಎಂಬುದಾಗಿಯೂ ಸಚಿವಾಲಯ ಈಗಾಗಲೇ ಮಾಹಿತಿ ನೀಡಿದೆ. 2023 ಕ್ಕೆ ಕಾರ್ಯರೂಪಕ್ಕೆ ಬರುವಂತೆ 109 ರೈಲು ಮಾರ್ಗಗಳಲ್ಲಿ 150 ಖಾಸಗಿ ರೈಲು ಓಡಾಟಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ.
ಹಾಗೆಯೇ ಯಾವ ನಿಲ್ದಾಣದಲ್ಲಿ ರೈಲುಗಳ ನೀರಿನ ಟ್ಯಾಂಕ್ ಭರ್ತಿ ಮಾಡಲಾಗುತ್ತದೆ, ರೈಲ್ವೆ ಬೋಗಿಗಳ ಸ್ವಚ್ಛತೆಯ ಬಗ್ಗೆಯೂ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ ಸಂಚರಿಸುತ್ತಿರುವ ವೇಗದ ರೈಲುಗಳ ನಿಲುಗಡೆಗಿಂತ ಅಧಿಕ ಸಮಯ ಯಾವುದೇ ಖಾಸಗಿ ರೈಲುಗಳೂ ನಿಲುಗಡೆಯಾಗದಂತೆ ಸಚಿವಾಲಯ ಸೂಚಿಸಿದೆ. ಈಗಾಗಲೇ ಒಟ್ಟು 23 ಸಂಸ್ಥೆಗಳು ಖಾಸಗಿ ರೈಲುಗಳ ನಿರ್ವಹಣೆಗೆ ಆಸಕ್ತಿ ತೋರಿದ್ದು, 30 ಸಾವಿರ ಕೋಟಿ ರೂ ಹೂಡಿಕೆಯಾಗುವ ನಿರೀಕ್ಷೆಯೂ ಸಚಿವಾಲಯಕ್ಕಿದೆ.
ಖಾಸಗಿ ರೈಲು ಪ್ರಯಾಣದ ದರವನ್ನು ನಿಗದಿ ಮಾಡುವ ಅವಕಾಶವನ್ನು ಖಾಸಗಿಯವರಿಗೇ ಬಿಟ್ಟುಕೊಡಲಾಗಿರುವುದಾಗಿಯೂ ರೈಲ್ವೆ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.