ನವದೆಹಲಿ: ಕೊರೋನಾ ಲಾಕ್ಡೌನ್ ಸಂಕಷ್ಟದ ನಡುವೆ ಕೆಲವು ಮಹಿಳೆಯರಿಗೆ ಮಾನಸಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗಿದ್ದು, ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಹಾಯವಾಣಿಯೊಂದನ್ನು ತೆರೆಯಲು ರಾಷ್ಟ್ರೀಯ ಮಹಿಳಾ ಆಯೋಗ ಮುಂದಾಗಿದೆ.
ಎಲ್ಲಾ ದಿನಗಳಲ್ಲಿಯೂ, 24 ಗಂಟೆಗಳ ಕಾಲವೂ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಚಂಢೀಘಡದ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ನ ಅಡಿಯಲ್ಲಿ ಈ ಸಹಾಯವಾಣಿಯನ್ನು ಅಭಿವೃದ್ಧಿ ಮಾಡುವ ಕೆಲಸಗಳೂ ಸಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಮಾತನಾಡಿರುವ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಮಹಿಳಾ ಆಯೋಗದ ಅಂಕಿಅಂಶಗಳ ಪ್ರಕಾರ 2019 ಡಿಸೆಂಬರ್ನಿಂದ 2020 ಮಾರ್ಚ್ವರೆಗೆ ಇಂತಹ ಕಿರುಕುಳಕ್ಕೆ ಸಂಬಂಧಿಸಿದಂತೆ 1550 ದೂರುಗಳು ದಾಖಲಾಗಿತ್ತು. ಆದರೆ 2020 ಎಪ್ರಿಲ್ನಿಂದ ಈ ವರೆಗೆ 2320 ದೂರುಗಳು ದಾಖಲಾಗಿದೆ. ಈ ಸಂಖ್ಯೆಯಲ್ಲಿನ ಹೆಚ್ಚಳವೇ ಮಹಿಳಾ ದೌರ್ಜನ್ಯ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಸಹಾಯವಾಣಿ ಆರಂಭಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಮಹಿಳೆಯರು ಕಛೇರಿ ಕೆಲಸಗಳನ್ನು ಮನೆಯಿಂದಲೇ ಮಾಡಬೇಕಿತ್ತು. ಈ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪೋಷಕರು, ಗೆಳೆಯರನ್ನೂ ಸಂಪರ್ಕಿಸುವಂತಿರಲಿಲ್ಲ. ಈ ಸಂದರ್ಭದಲ್ಲಿ ಮಹಿಳಾ ಆಯೋಗದ ವಾಟ್ಸಾಪ್ ಸಂಖ್ಯೆಗೆ ಹೆಚ್ಚು ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಸಹಾಯವಾಣಿ ಆರಂಭ ಮಾಡಲು ಚಿಂತನೆ ನಡೆಸಿದ್ದಾಗಿಯೂ ಅವರು ತಿಳಿಸಿದ್ದಾರೆ.
ಆರಂಭದಲ್ಲಿ ಉತ್ತರ ಭಾರತದಲ್ಲಿ ಈ ಸಹಾಯವಾಣಿ ಆರಂಭಿಸಲಾಗುವುದು. ಬಳಿಕ ದೇಶದ ಇತರೆಡೆಗಳಿಗೂ ಈ ಸಹಾಯವಾಣಿ ಸಹಾಯವನ್ನು ವಿಸ್ತರಿಸಲಾಗುವುದು ಎಂದು ರೇಖಾ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.