ಜಮ್ಮು: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಅಮಾನತುಗೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ಯಾತ್ರೆ ಸುಮಾರು ಐದು ತಿಂಗಳ ನಂತರ ಮತ್ತೆ ಆಗಸ್ಟ್ 16 ರಿಂದ ಪುನರಾರಂಭಗೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ತಿಳಿಸಿದೆ.
ಯಾತ್ರೆ ಪುನರಾರಂಭಕ್ಕೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿ (ಎಸ್ಎಂವಿಡಿಎಸ್ಬಿ) ತಿಳಿಸಿದೆ. ದೇವಾಲಯದ ಆವರಣವನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕದ ಎಲ್ಲಾ ರೂಢಿಗಳನ್ನು ಪಾಲಿಸಿಕೊಂಡೇ ಯಾತ್ರಿಕರನ್ನು ಸ್ವಾಗತಿಸಲಾಗುತ್ತದೆ ಎಂದು ಅದು ಹೇಳಿದೆ.
ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನದ ನಂತರ ಈ ತಿಂಗಳ 16 ರಿಂದ ನೂತನ ಕೇಂದ್ರಾಡಳಿತ ಪ್ರದೇಶದಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಅನ್ಲಾಕ್ 3.0 ರ ಅಂಗವಾಗಿ ಆಗಸ್ಟ್ 16 ರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಎಲ್ಲಾ ಧಾರ್ಮಿಕ ಸ್ಥಳಗಳು ಮತ್ತು ಪೂಜಾ ಸ್ಥಳಗಳನ್ನು ತೆರೆಯುವುದಾಗಿ ಆಗಸ್ಟ್ 4 ರಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಅಧಿಕೃತ ವಕ್ತಾರ ರೋಹಿತ್ ಕನ್ಸಾಲ್ ಘೋಷಿಸಿದ್ದರು.
ಆದರೆ, ಧಾರ್ಮಿಕ ಮೆರವಣಿಗೆಗಳು ಮತ್ತು ದೊಡ್ಡ ಧಾರ್ಮಿಕ ಕೂಟಗಳನ್ನು ನಿಷೇಧಿಸಲಾಗಿದೆ.
ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸೆಪ್ಟೆಂಬರ್ 30 ರವರೆಗೆ ಶ್ರೇಣೀಕೃತ ರೀತಿಯಲ್ಲಿ ದಿನಕ್ಕೆ ಗರಿಷ್ಠ 5,000 ಯಾತ್ರಾರ್ಥಿಗಳ ಸೀಲಿಂಗ್ ಇರುತ್ತದೆ. ಪ್ರಸ್ತುತ ಕೌಂಟರ್ಗಳಲ್ಲಿ ಜನದಟ್ಟಣೆ ತಪ್ಪಿಸುವ ಸಲುವಾಗಿ ಆನ್ಲೈನ್ ಮೋಡ್ ಮೂಲಕ ಮಾತ್ರ ನೋಂದಣಿಯನ್ನು ಮುಂಚಿತವಾಗಿ ಮಾಡಲು ಯಾತ್ರಾರ್ಥಿಗಳಿಗೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.