ಬೆಂಗಳೂರು: ಉತ್ತರ ಭಾರತದಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಅಲ್ಲಿನ ಯೋಗಿ ನೇತೃತ್ವದ ಸರ್ಕಾರ ವಿಶ್ವದ ಅತೀ ಎತ್ತರವಿರುವ (221 m) ಶ್ರೀ ರಾಮನ ಮೂರ್ತಿಯನ್ನು ನಿರ್ಮಾಣ ಮಾಡುವ ಮಾಹಿತಿಯನ್ನು ಈಗಾಗಲೇ ನೀಡಿದೆ. ಇದೀಗ ಕರ್ನಾಟಕದ ಹಂಪಿಯಲ್ಲಿ ಹೊಸದಾಗಿ ರೂಪುಗೊಂಡಿರುವ ಸಂಘವೊಂದು ಹಂಪಿಯಲ್ಲಿ 215 ಅಡಿ ಎತ್ತರದ ಹನುಮನ ಮೂರ್ತಿಯೊಂದನ್ನು ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.
ಹಂಪಿ ಮೂಲದ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸುಮಾರು 1,200 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನಿಗಿಂತ 6ಮೀ ಕಡಿಮೆ ಎತ್ತರವುಳ್ಳ ಹನುಮಂತನ ಮೂರ್ತಿಯನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದೆ. ಹನುಮ ಜನ್ಮಭೂಮಿ ಕಿಷ್ಕಿಂದೆಯಲ್ಲಿ ಮುಂದಿನ ಆರು ವರ್ಷಗಳೊಳಗಾಗಿ ಈ ಮೂರ್ತಿಯ ಕೆತ್ತನೆ ಸಂಪೂರ್ಣವಾಗಲಿರುವುದಾಗಿಯೂ ಟ್ರಸ್ಟ್ ಮಾಹಿತಿ ನೀಡಿದೆ.
ಅಯೋಧ್ಯೆಯ ರಾಮನಿಗಿಂತ ಆತನ ಬಂಟನ ಮೂರ್ತಿ ಎತ್ತರವಾಗಿರಬಾರದು ಎಂಬ ಕಾರಣದಿಂದ 6 ಅಡಿ ಕಡಿಮೆ ಎತ್ತರವುಳ್ಳ ಹನುಮನ ಮೂರ್ತಿಯನ್ನು ನಿರ್ಮಾಣ ಮಾಡುವುದಾಗಿಯೂ ಟ್ರಸ್ಟ್ ಮಾಹಿತಿ ನೀಡಿದೆ. ಈ ಪ್ರತಿಮೆ ನಿರ್ಮಿಸುವ ಮೂಲಕ ಅಯೋಧ್ಯೆ ಮತ್ತು ಕಿಷ್ಕಿಂದೆಯ (ರಾಮ ಮತ್ತು ಹನುಮ) ಭಾಂಧವ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಲಾಗುವುದಾಗಿಯೂ ಟ್ರಸ್ಟ್ ಹೇಳಿದೆ.
ಇನ್ನು ಈ ವಿಗ್ರಹ ನಿರ್ಮಾಣಕ್ಕೆ ಅಗತ್ಯವಿರುವ ಮೊತ್ತವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಹನುಮಾನ್ ರಥಯಾತ್ರೆಯನ್ನು ನಡೆಸಲಾಗುವುದಾಗಿಯೂ ಸಂಘ ತಿಳಿಸಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೂ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಈ ಮನವಿಯನ್ನು ಸರ್ಕಾರ ಪುರಸ್ಕರಿಸುವ ಭರವಸೆ ಇರುವುದಾಗಿಯೂ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಟಿ. ರವಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಮಾಯಣಕ್ಕೆ ಸಂಬಂಧಪಟ್ಟ ದೇಶದ ಎಲ್ಲಾ ಪ್ರದೇಶಗಳನ್ನು ಮತ್ತೆ ಒಗ್ಗೂಡಿಸುವ, ಹಳೆಯ ನೆನಪುಗಳಿಗೆ ಜೀವ ತುಂಬುವ ಕೆಲಸಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದ ಕಿಷ್ಕಿಂದೆ, ಗೋಕರ್ಣದ ಮಹಾಬಲೇಶ್ವರ ದೇಗುಲ ಮತ್ತು ಚಿಕ್ಕಮಗಳೂರಿನ ಚಂದ್ರ ದ್ರೋಣ ಪರ್ವತ ಎಂಬ ಮೂರು ಪ್ರದೇಶಗಳು ರಾಮಯಣದಲ್ಲಿ ಪಾಲು ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.