ನವದೆಹಲಿ: ʼಒನ್ ನೇಷನ್, ಒನ್ ರೇಷನ್ ಕಾರ್ಡ್ʼ ಯೋಜನೆಗೆ ನಾಗಾಲ್ಯಾಂಡ್, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ರಾಜ್ಯಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದು ಬಡ ಜನರಿಗೆ ದೇಶದೆಲ್ಲೆಡೆ ಆಹಾರ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲು ಕೇಂದ್ರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳ ಆಹಾರ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವನ್ ಒನ್ ನೇಷನ್ ಒನ್ ರೇಷನ್ ಯೋಜನೆಯ ಪ್ರಗತಿ ಪರಿಶೀಲನೆಯನ್ನೂ ನಡೆಸಿದ್ದಾರೆ.
ಇದೀಗ ಮತ್ತೆ ನಾಲ್ಕು ರಾಜ್ಯಗಳು ಈ ಯೋಜನೆಯಡಿಯಲ್ಲಿ ಪಾಲು ಪಡೆದಿವೆ. ಆ ಮೂಲಕ 65 ಕೋಟಿಯಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಯೋಜನೆಯಡಿಯಲ್ಲಿ ಬರುವ ಯಾವುದೇ ರಾಜ್ಯದಲ್ಲಿಯೂ ಪಡಿತರ ಪಡೆಯಲು ಅರ್ಹರಾಗಿದ್ದಾರೆ ಎಂದೂ ಸರ್ಕಾರ ಮಾಹಿತಿ ನೀಡಿದೆ. 2021 ರ ವೇಳೆಗೆ ದೇಶದ ಮತ್ತಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ಈ ಯೋಜನೆಯಡಿಯಲ್ಲಿ ಗುರುತಿಸುವುದಾಗಿಯೂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ದೇಶದ ಯಾವುದೇ ಪ್ರದೇಶದಲ್ಲಾದರೂ ಅವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯ ರೂಪುರೇಶೆಗಳನ್ನು ಸಿದ್ಧಪಡಿಸಲಾಗಿದೆ. ಆ ಮೂಲಕ ಉದ್ಯೋಗ, ಮತ್ತಿತರ ಕಾರಣಗಳಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ ಬಡ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಯಿಂದ ಕಡಿಮೆ ಬೆಲೆಗೆ ಆಹಾರ ವಸ್ತುಗಳನ್ನು ದೊರಕುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಯಾವುದೇ ರಾಜ್ಯದ ಪಡಿತರ ಚೀಟಿ ಹೊಂದಿರುವವರು ಮತ್ತೊಂದು ಪ್ರದೇಶದಲ್ಲಿ ಬೆರಳಚ್ಚು ದೃಢೀಕರಣದ ಮೂಲಕವೇ ನ್ಯಾಯಯುತ ಬೆಲೆಗೆ ಆಹಾರ ವಸ್ತುಗಳನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ.
ಈ ಯೋಜನೆಯಡಿಯಲ್ಲಿ ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಗೋವಾ, ದಿಯು, ದಾಮನ್, ಕರ್ನಾಟಕ ಸೇರಿದಂತೆ ದೇಶದ ಒಟ್ಟು 24 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನು ನೋಂದಾಯಿಸಲಾಗಿದೆ. 2021 ರ ವೇಳೆಗೆ ಮತ್ತಷ್ಟು ರಾಜ್ಯಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.