ನವದೆಹಲಿ: ಕೊರೋನಾ ಸೋಂಕಿನಿಂದ ಮೃತಪಟ್ಟ ಯೋಧರನ್ನು ಹುತಾತ್ಮ ಎಂದು ಗೌರವಿಸಿ, ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿ ಭಾರತೀಯ ಸೇನೆ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದೆ. ಅದರಂತೆ ಕರ್ತವ್ಯ ನಿರತರಾಗಿರುವ ಯೋಧರು ಕೊರೋನಾದಿಂದ ಮಡಿದರೆ, ಅಂತಹ ಯೋಧರನ್ನು ಹುತಾತ್ಮರೆಂದು ಘೋಷಿಸಿ ಗೌರವಿಸಲಾಗುವುದು ಮತ್ತು ‘ಭಾರತ್ ಕೆ ವೀರ್’ ನಿಧಿಯಿಂದ ಅವರ ಕುಟುಂಬಗಳಿಗೆ ಪರಿಹಾರವಾಗಿ 15 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಹೊಸ ಕ್ರಮಕ್ಕೆ ಸಂಬಂಧಿಸಿದಂತೆ ಈ ವರೆಗೆ ಕೊರೋನಾ ಸೋಂಕು ತಗುಲಿ ಮೃತಪಟ್ಟ ಯೋಧರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿಯೂ ಕೇಂದ್ರ ಸರ್ಕಾರ ಕೆಲಸ ನಿರ್ವಹಿಸಲಾರಂಭಿಸಿದೆ. ಅದರೊಂದಿಗೆ ಅಂತಹ ಯೋಧರ ಕುಟುಂಬಗಳಿಗೆ ಪರಿಹಾರ ಒದಗಿಸುವ ಸಂಬಂಧ ಅವರ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆ ಮೊದಲಾದವುಗಳನ್ನು ಸಂಗ್ರಹಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಾಗಲೇ ಆರಂಭ ಮಾಡಿದೆ. ಪರಿಹಾರ ಧನವನ್ನು ನೇರವಾಗಿ ಸಂಬಂಧಿಸಿದವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇನ್ನು ಈ ಪರಿಹಾರ ಧನವನ್ನು ಕೇಂದ್ರ ಸರ್ಕಾರದ ಭಾರತ್ ಕೆ ವೀರ್ ನಿಧಿಯಿಂದ ನೀಡಲಾಗುತ್ತಿದ್ದು, 2017 ರಲ್ಲಿ ಕೇಂದ್ರ ಗೃಹ ಸಚಿವಾಲಯ ಈ ವೆಬ್ ಪೋರ್ಟಲ್ ಗೆ ಚಾಲನೆಯನ್ನೂ ನೀಡಿತ್ತು. ಸಾರ್ವಜನಿಕರು ಸಹ ಈ ಪೋರ್ಟಲ್ ಗೆ ಆರ್ಥಿಕ ಸಹಾಯ ಮಾಡುವ ಮೂಲಕ ಯೋಧರ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸಬಹುದಾಗಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ. ಈ ನಿಧಿಗೆ 2017 ರಿಂದಲೂ ಭಾರತದ ಜನರು ನೆರವಿನ ಹಸ್ತವನ್ನು ಹಣದ ರೂಪದಲ್ಲಿ ನೀಡುತ್ತಿದ್ದು, ಪುಲ್ವಾಮಾ ದಾಳಿಯ ಬಳಿಕ ಈ ನಿಧಿಗೆ ಸಹಾಯ ನೀಡುವವರ ಸಂಖ್ಯೆ ಅಧಿಕವಾಗಿರುವುದಾಗಿಯೂ ಸಂಬಂಧಪಟ್ಟ ಮೂಲಗಳು ಮಾಹಿತಿ ನೀಡಿವೆ. ಪುಲ್ವಾಮ ಘಟನೆಯ ನಂತರ ಈ ನಿಧಿಗೆ 250 ಕೋಟಿ ರೂ. ಸಾರ್ವಜನಿಕ ವಲಯದಿಂದಲೇ ಜಮೆಯಾಗಿರುತ್ತದೆ ಎಂದೂ ಮೂಲಗಳು ಮಾಹಿತಿ ನೀಡಿವೆ.
ಇನ್ನು ದೇಶದಲ್ಲಿ ಈ ವರೆಗೆ 8,113 ರಷ್ಟು ಯೋಧರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 4,512 ಮಂದಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 3,562 ಸಕ್ರಿಯ ಪ್ರಕರಣಗಳು ವರದಿಯಾಗಿದ್ದರೆ, ಕೊರೋನಾದಿಂದ 39 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.