ಮುಂಬೈ: ಕೋವಿಡ್-19ಗೆ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯ ಕಂಡುಹಿಡಿದಿರುವ ಲಸಿಕೆಯ ಒಂದು ಬಿಲಿಯನ್ ಡೋಸೇಜ್ ಗಳನ್ನು ಪೂರೈಕೆ ಮಾಡಲು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಜ್ಸ್ಟ್ರಾಜೆನೆಕಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಜೊತೆಗೆ ಈ ಲಸಿಕೆಗಳನ್ನು ಒಂದೆರಡು ವಾರಗಳಲ್ಲಿಯೇ ಭಾರತದಲ್ಲಿಯೂ ಪ್ರಾಯೋಗಿಕವಾಗಿ ಬಳಕೆ ಮಾಡಲಿರುವುದಾಗಿ ಮಾಹಿತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೆರಂ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧರ್ ಪೂನವಲಾ, ಈ ಲಸಿಕೆಯನ್ನು ಭಾರತದಲ್ಲಿ ಬಳಕೆ ಮಾಡುವ ಸಂಬಂಧ ಅನುಮತಿಗಾಗಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಸಂಸ್ಥೆ ಅನುಮತಿ ನೀಡಿದ ತಕ್ಷಣವೇ ಈ ಔಷಧವನ್ನು ಭಾರತದಲ್ಲಿಯೂ ಪ್ರಾಯೋಗಿಕವಾಗಿ ಬಳಕೆ ಮಾಡಲು ಆರಂಭಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ. ಜೊತೆಗೆ ಈ ಲಸಿಕೆಯನ್ನು ತಮ್ಮ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿಸುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಯುಕೆಯ ಆಕ್ಸ್ಫರ್ಡ್ ವಿವಿಯ ಸಂಶೋಧಕರು ತಯಾರಿಸಿದ ಕೊರೋನಾ ಲಸಿಕೆ ಸುರಕ್ಷಿತವಾಗಿ, ಮಾನವನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹೆಚ್ಚು ಪೂರಕವಾಗಿ ಕೆಲಸ ಮಾಡಲಿದೆ. ಈ ಕುರಿತಾದ ಅಂಶಗಳನ್ನು ತಿಳಿಸುವ ವರದಿಯನ್ನು ವೈದ್ಯಕೀಯ ಪತ್ರಿಕೆ ದಿ ಲಾನ್ಸೆಟ್ ನಲ್ಲಿಯೂ ಪ್ರಕಟಿಸಲಾಗಿದ್ದು, ಆ ಮೂಲಕ ಈ ಲಸಿಕೆಯ ಸಾಧಕ ಬಾಧಕಗಳನ್ನು ತಿಳಿಸಲಾಗಿದೆ. ಜೊತೆಗೆ ಈ ಔಷಧವನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಲು ಆಕ್ಸ್ಫರ್ಡ್ ಜೊತೆ ಆಜ್ಸ್ಟ್ರಾಜೆನೆಕಾ ಸಂಸ್ಥೆ ಕೈ ಜೋಡಿಸಿದ್ದು, ಎರಡು ಶತಕೋಟಿ ಲಸಿಕೆಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಇದಕ್ಕಾಗಿ ಜಗತ್ತಿನ ಅನೇಕ ರಾಷ್ಟ್ರಗಳ ಔಷಧ ತಯಾರಿಕಾ ಸಂಸ್ಥೆಗಳ ಜೊತೆಗೂ ಆಜ್ಸ್ಟ್ರಾಜೆನೆಕಾ ಒಪ್ಪಂದ ಮಾಡಿಕೊಂಡಿದೆ. ಭಾರತದ ಬಹು ದೊಡ್ಡ ಔಷಧ ತಯಾರಿಕಾ ಸಂಸ್ಥೆ ಸೆರಾ ಸಹ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, 1 ಬಿಲಿಯನ್ ಲಸಿಕೆ ತಯಾರಿಸುವುದಾಗಿಯೂ ಮಾಹಿತಿ ನೀಡಿದೆ. ಅಲ್ಲದೆ ಆಗಸ್ಟ್ ತಿಂಗಳಿನಿಂದ ಭಾರತದಲ್ಲಿ ಮಾನವನ ಮೇಲೆ ಈ ಲಸಿಕೆಗಳನ್ನು ಪ್ರಾಯೋಗಿಕ ಬಳಕೆ ಮಾಡುವುದಾಗಿಯೂ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.