ನವದೆಹಲಿ: ಕೊರೋನಾ ವೈರಸ್ ವ್ಯಾಪಿಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಮಧ್ಯೆಯೂ ಸಾರ್ವಜನಿಕರಿಗೆ ಭರವಸೆ ಹುಟ್ಟಿಸುವ ವಿಚಾರವೊಂದನ್ನು ಕೇಂದ್ರ ಸರ್ಕಾರ ತಿಳಿಸಿದೆ. ಈ ವರೆಗೂ ಸುಮಾರು 7 ಲಕ್ಷದ 87 ರಷ್ಟು ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ. ಆ ಮೂಲಕ ಭಾರತದಲ್ಲಿ ಚೇತರಿಕೆಯ ಪ್ರಮಾಣ 62. 61% ರಷ್ಟಾಗಿದೆ ಎಂದೂ ಈ ವರದಿ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 22,664 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ 3,90,459 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಈ ವರದಿಯಲ್ಲಿ ಸರ್ಕಾರ ಹೇಳಿದೆ. ಕಳೆದ ಒಂದು ದಿನದಲ್ಲಿ ದೇಶದಲ್ಲಿ 40,425 ಸೋಂಕಿತರ ಪ್ರಕರಣ ವರದಿಯಾಗಿದೆ. ಆ ಮೂಲಕ ಈ ವರೆಗೆ ಒಟ್ಟು 11,18,043 ರಷ್ಟು ಸೋಂಕಿತರ ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ. ಕೇವಲ 24 ಗಂಟೆಯಲ್ಲೇ ದೇಶದಲ್ಲಿ 681 ಸಾವುಗಳು ಸಂಭವಿಸಿದ್ದು, ಆ ಮೂಲಕ ಕೊರೋನಾ ದಿಂದ ಮೃತಪಟ್ಟವರ ಸಂಖ್ಯೆ ಒಟ್ಟಾಗಿ 27,497 ಕ್ಕೇರಿದೆ. ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ವರೆಗೆ 2.45% ರಷ್ಟು ಸಾವು ಸಂಭವಿಸಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 2,56,039 ರಷ್ಟು ಜನರಿಗೆ ದೇಶದ ವಿವಿಧ ಕೊರೋನಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಆ ಮೂಲಕ ದೇಶದಲ್ಲಿ ಈ ವರೆಗೆ 1,40,47,908 ಜನರು ಕೊರೋನಾ ಪರೀಕ್ಷೆ ಮಾಡಿಸಿಕೊಂಡಿರುವುದಾಗಿಯೂ ಐಸಿಎಂಆರ್ ತಿಳಿಸಿದೆ. ಪ್ರಸ್ತುತ ಭಾರತದಲ್ಲಿ ಕೊರೋನಾ ಪರೀಕ್ಷೆಯ ಹಿನ್ನೆಲೆಯಲ್ಲಿ 890 ಸರ್ಕಾರಿ ಪ್ರಯೋಗಾಲಯಗಳು ಮತ್ತು 378 ಖಾಸಗಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.
ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಡಾಕ್, ದೆಹಲಿ, ಹರಿಯಾಣ, ಗುಜರಾತ್, ರಾಜಸ್ಥಾನ ಗಳಲ್ಲಿ ಚೇತರಿಕೆಯ ಪ್ರಮಾಣ 72% ಕ್ಕೆ ಏರಿಕೆಯಾಗಿದೆ. ಕೊರೋನಾ ದಿಂದ ಚೇತರೌಸಿಕೊಂಡವರ ಸಂಖ್ಯೆಯಲ್ಲಿ ತಮಿಳುನಾಡು, ದೆಹಲಿಯ ನಂತರದಲ್ಲಿ ಮಹಾರಾಷ್ಟ್ರ ಗುರುತಿಸಿಕೊಂಡಿದೆ ಎಂದೂ ಈ ವರದಿ ಮಾಹಿತಿ ನೀಡಿದೆ. ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಂ, ಅಂಡಮಾನ್ ಮತ್ತು ನಿಕೋಬಾರ್ಗಳಲ್ಲಿ ಈ ವರೆಗೂ ಕೋವಿಡ್ ನಿಂದಾಗಿ ಒಂದೇ ಒಂದು ಸಾವು ಸಂಭವಿಸಿಲ್ಲ ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.