ವಾಷಿಂಗ್ಟನ್: ಇತ್ತೀಚೆಗೆ ಭಾರತೀಯ ಯೋಗ ಪದ್ಧತಿಯತ್ತ ಇಡೀ ವಿಶ್ವವೇ ಚಿತ್ತ ಹರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕಾವೂ ಯೋಗಕ್ಕೆ ಮಹತ್ವ ನೀಡಲಾರಂಭಿಸಿದ್ದು, ಲಾಸ್ ಏಂಜಲೀಸ್ನಲ್ಲಿ ಯೋಗ ವಿಶ್ವ ವಿದ್ಯಾಲಯವನ್ನು ಆರಂಭ ಮಾಡಿದೆ.
ಭಾರತವನ್ನು ಹೊರತುಪಡಿಸಿದಂತೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯ ಎಂದು ಈ ವಿವಿ ಖ್ಯಾತಿ ಪಡೆದಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ಯೋಗ ವಿಶ್ವ ವಿದ್ಯಾಲಯವನ್ನು ಆರಂಭ ಮಾಡಲಾಗಿದೆ. ಕ್ಯಾಲಿಫೋರ್ನಿಯಾದ ಬ್ಯೂರೋ ಆಫ್ ಪ್ರೈವೇಟ್ ಪೋಸ್ಟ್ ಸೆಕೆಂಡರಿ ಎಜುಕೇಶನ್ನಿಂದ ಅನುಮತಿ ಪಡೆದುಕೊಂಡು ಈ ವಿವಿಯನ್ನು ಆರಂಭ ಮಾಡಲಾಗಿದೆ.
ಈ ಸಂಸ್ಥೆಗೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್ ಮತ್ತು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ಪಿ ಚೌಧರಿ ಅವರು ವರ್ಚುವಲ್ ಕಾನ್ಫರೆನ್ಸ್ ಮೂಲಕ ಮಂಗಳವಾರ ಚಾಲನೆ ನೀಡಿದ್ದಾರೆ. ಈ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಭಾರತದ ಪ್ರಖ್ಯಾತ ಯೋಗ ಗುರು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ವೈಜ್ಞಾನಿಕ ತತ್ವಗಳು ಮತ್ತು ಆಧುನಿಕ ಸಂಶೋಧನೆಗೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ನೀಡುವುದಾಗಿಯೂ ಸಂಸ್ಥೆ ತಿಳಿಸಿದೆ. ವರ್ಚುವಲ್ ತರಗತಿಗಳನ್ನು ಆಗಸ್ಟ್ 24 ರಿಂದ ತೊಡಗಿದಂತೆ ಆರಂಭಿಸುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಪ್ರಾಧ್ಯಾಪಕರ ನೇಮಕವನ್ನು ಭಾರತದ ಮೊದಲ ಯೋಗ ವಿವಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಮೂಲಕ ಆಯ್ಕೆ ಮಾಡಲಾಗುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಈ ವಿವಿಯಲ್ಲಿ ಪೂರ್ವ ಮತ್ತು ಪಶ್ಚಿಮ ದೇಶಗಳ ಅತ್ಯುತ್ತಮ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ವೈಜ್ಞಾನಿಕ ರೀತಿಯಲ್ಲಿ ಜ್ಞಾನಾರ್ಜನೆಗೆ ಅವಕಾಶ ನೀಡುವುದಾಗಿ ಸಂಸ್ಥೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.