ತಮಿಳುನಾಡು: ದೇಶವೇ ಕೊರೋನಾ ಎಂಬ ಮಹಾಮಾರಿಯ ಕೈಗೆ ಸಿಲುಕಿ ನಲುಗುತ್ತಿದೆ. ತಮಿಳುನಾಡಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ರಿಕ್ಷಾಗಳಲ್ಲಿ ಕೊರೋನಾ ಥೀಮ್ನಂತೆ ಸೋಂಕು ನಿಯಂತ್ರಕ ರೊಬೋಟ್ಗಳನ್ನು ಬಳಸಿ ಕಂಟೈನ್ಮೆಂಟ್ ಪ್ರದೇಶಗಳನ್ನು ಸ್ಯಾನಿಟೈಝ್ ಮಾಡಿ ಸ್ವಚ್ಛಗೊಳಿಸುವ ಕ್ರಮಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಆ ಮೂಲಕ ಸೋಂಕು ತಡೆಗೆ ಕ್ರಮ ಕೈಗೊಂಡಿದೆ. ಮುಖ್ಯವಾಗಿ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ಚೆನ್ನೈನಲ್ಲಿ ಈ ರೋಬೋಟ್ ಮೂಲಕ ಸ್ಯಾನಿಟೈಸಿಂಗ್ ಕ್ರಮವನ್ನು ಅನುಸರಿಸಲಾಗಿದೆ.
ಈ ರೊಬೋಟ್ಗಳನ್ನು ಗೌತಮ್ ಎಂಬುವವರು ವಿನ್ಯಾಸಗೊಳಿಸಿದ್ದು, ಇದು ಏಕಕಾಲಕ್ಕೆ 30 ಲೀ. ಗಳಷ್ಟು ಸೋಂಕು ನಿವಾರಕ ಔಷಧವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಸೋಂಕು ನಿಯಂತ್ರಣ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಇದು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಶಕ್ತಿಯನ್ನು ಹೊಂದಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.
ಬುಧವಾರ ತಮಿಳುನಾಡಿನಲ್ಲಿ ಸುಮಾರು 688 ಕೊರೋನಾ ಸೋಂಕಿತರ ಪ್ರಕರಣ ವರದಿಯಾಗಿದ್ದು, ಅದರಲ್ಲಿ 552 ಪ್ರಕರಣಗಳು ಕೇವಲ ಚೆನ್ನೈ ನಗರವೊಂದರಿಂದಲೇ ವರದಿಯಾಗಿದೆ. ಉಳಿದಂತೆ ಇತರ ರಾಜ್ಯಗಳು ಮತ್ತು ವಿದೇಶದಿಂದ ರಾಜ್ಯಕ್ಕಾಗಮಿಸಿದವರಲ್ಲಿ 87 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. ಅವರಲ್ಲಿ ಕೇರಳ, ಮಹಾರಾಷ್ಟ್ರ, ದುಬೈ, ಮಾಲ್ಡಿವ್ಸ್, ಮಲೇಷ್ಯಾ, ಕುವೈಟ್ನಿಂದ ಆಗಮಿಸಿದವರೂ ಇದ್ದಾರೆ ಎಂಬುದಾಗಿ ಮಾಹಿತಿ ಇದೆ.
ಇನ್ನು ಚೆನ್ನೈನ ಕೊಯಂಬೀಡು ತರಕಾರಿ ಮತ್ತು ಹಣ್ಣು, ಹೂವಿನ ಮಾರುಕಟ್ಟೆಯಲ್ಲೀಯೂ ಕೊರೋನಾ ಸೋಂಕು ತಾಂಡವವಾಡುತ್ತಿದ್ದು, ಇಲ್ಲಿಂದ ಸೋಂಕು ಹರಡಿಸಿಕೊಂಡ ಜನರು ಇನ್ನಿತರ ಪ್ರದೇಶಗಳಿಗೆ ಸಂಚರಿಸಿ ಸೋಂಕು ಹರಡುವುದಕ್ಕೂ ಕಾರಣರಾಗಿದ್ದಾರೆ. ಈ ಮಾರುಕಟ್ಟೆ ಪ್ರದೇಶದಲ್ಲಿ ಸುಮಾರು 300 ರಷ್ಟು ಕೊರೋನಾ ಪ್ರಕರಣಷಪತ್ತೆಯಾಗಿದ್ದು, ಸರ್ಕಾರ ಈ ಮಾರುಕಟ್ಟೆಯನ್ನು ಮುಚ್ಚಿ, ಬೇರೆಡೆ ವ್ಯಾಪಾರಕ್ಕೆ ಅವಕಾಶ ನೀಡಿದೆ. ಆದರೂ ಜನರು ಇಲ್ಲೇ ವಹಿವಾಟು ನಡೆಸಿದ್ದರಿಂದಲೇ ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಸರ್ಕಾರ ತಿಳಿಸಿದೆ.
ಈ ಹೇಳಿಕೆಯನ್ನು ವಿರೋಧಿಸಿರುವ ಪ್ರತಿಪಕ್ಷ ಡಿಎಂಕೆ, ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಮಾಡುವಲ್ಲಿ ಸರ್ಕಾರ ವೈಫಲ್ಯವನ್ನು ಕಂಡಿದ್ದು, ಇದೀಗ ವ್ಯಾಪಾರಸ್ಥರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದೆ.
ತಮಿಳುನಾಡಿನಲ್ಲಿ ಈ ವರೆಗೆ 12,448 ಕೊರೋನಾ ಸೋಂಕು ವರದಿಯಾಗಿದ್ದು, 84 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.