ರಾಜಸ್ಥಾನ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಣ್ಣದೊಂದು ಪ್ರಯತ್ನದ ಹೆಜ್ಜೆ ಕೂಡ ದೊಡ್ಡ ಭರವಸೆಯನ್ನು ಮೂಡಿಸುವ ಈ ಸಮಯದಲ್ಲಿ, ರಾಜಸ್ಥಾನದ ಹಳ್ಳಿಯೊಂದರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ಹಲವಾರು ಕುಂಬಾರರು ಕೊರೋನಾವೈರಸ್ ಹರಡುವುದನ್ನು ತಡೆಗಟ್ಟುವ ವಿಶಿಷ್ಟ ಅಭಿಯಾನ ಪ್ರಾರಂಭಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ರಾಜಸ್ಥಾನದ ಬರಾನ್ ಜಿಲ್ಲೆಯ ಕಿಶಂಗಂಜ್ ಗ್ರಾಮದ ಈ ಕುಂಬಾರರು, ತಾವು ತಯಾರಿಸಿದ ಪ್ರತಿಯೊಂದು ಮಣ್ಣಿನ ಮಡಕೆ, ವಿಶೇಷವಾಗಿ ನೀರಿನ ಹೂಜಿಗಳಲ್ಲಿ ಕೊರೋನಾ ವಿರುದ್ಧ ಹೋರಾಡುವ ಮಾರ್ಗವಿಧಾನಗಳ ಬಗ್ಗೆ ಸಂದೇಶ ಸಾರಿದ್ದಾರೆ. ಈ ಸಂದೇಶವು ಪ್ರತಿ ಬಳಕೆದಾರರ ಮನೆಗೆ ನೇರವಾಗಿ ತಲುಪುತ್ತದೆ ಮತ್ತು ಕುಟುಂಬದ ಸದಸ್ಯರು ಪ್ರತಿ ಬಾರಿ ಅದರಿಂದ ನೀರು ಕುಡಿಯುವಾಗ ಸಂದೇಶವನ್ನು ನೋಡುತ್ತಾರೆ, ಓದುತ್ತಾರೆ ಈ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವುದು ಕುಂಬಾರರ ಈ ಯೋಜನೆಯ ಹಿಂದಿರುವ ಚಿಂತನೆಯಾಗಿದೆ.
ಕುಂಬಾರರು “ಮುಖಗವಸು (ಮಾಸ್ಕ್) ಬಳಸಿ”, “ಮನೆಯಲ್ಲಿರಿ, ಸುರಕ್ಷಿತರಾಗಿರಿ (ಸ್ಟೇ ಹೋಮ್, ಸ್ಟೇ ಸೇಫ್)”, “ಮುಂಜಾಗರೂಕತೆಯೇ ಚಿಕಿತ್ಸೆ (ಪ್ರಿವೆನ್ಷನ್ ಈಸ್ ಕ್ಯೂರ್)” ಮತ್ತು “ಕೊರೋನಾದ ಬಗ್ಗೆ ಎಚ್ಚರಿಕೆ” ಮುಂತಾದ ಸಂದೇಶಗಳನ್ನು ಮಡಿಕೆಗಳಲ್ಲಿ ಮುದ್ರಿಸಿದ್ದಾರೆ. ಉಷ್ಣತೆಯ ಏರಿಕೆಯ ಇಂದಿನ ದಿನಗಳಲ್ಲಿ ಈ ಕುಂಬಾರರ ಮಡಿಕೆ ಮಾರಾಟ ಕೂಡಾ ಹೆಚ್ಚಾಗಿದೆ.
“ಜನಸಾಮಾನ್ಯರೊಂದಿಗೆ ನೇರ ಸಂವಹನ ನಡೆಸುವ ಇಂತಹ ವಿಶಿಷ್ಟ ವಿಧಾನವು ಕರೋನಾ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ, ಇಂತಹ ವಿಶಿಷ್ಟ ಅಭಿಯಾನವು ಇತರರಿಗೆ ಸ್ಫೂರ್ತಿಯಾಗಲಿದೆ” ಎಂದು ಕುಂಬಾರರ ನೂತನ ಪ್ರಯತ್ನವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ದ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಶ್ಲಾಘಿಸಿದ್ದಾರೆ.
ಕುಂಬಾರರ ಸಬಲೀಕರಣ (ಕುಮ್ಹಾರ್ ಸಶಕ್ತಿಕರಣ್) ಕಾರ್ಯಕ್ರಮದ ಫಲಾನುಭವಿಗಳಾದ ಕಿಶಂಗಂಜ್ ಗ್ರಾಮದ ಕುಂಬಾರರು ಮಾಡಿದ ಈ ನೂತನ ವಿಧಾನವನ್ನು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ, ಗುಜರಾತ್, ತಮಿಳುನಾಡು, ಒಡಿಶಾ, ತೆಲಂಗಾಣ ಮತ್ತು ಬಿಹಾರ್ ಹೀಗೆ ದೇಶದಾದ್ಯಂತ ಕುಂಬಾರರ ಸಮುದಾಯವನ್ನು ಬಲಪಡಿಸುವ ಗುರಿಯಾಗಿ ಕೆವಿಐಸಿಯು ಬಳಸಿಕೊಳ್ಳಲಿದೆ ಎಂದಿದ್ದಾರೆ.
ರಾಜಸ್ಥಾನದಲ್ಲಿ ಜೈಪುರ, ಕೋಟಾ, ಝಲಾವರ್ ಮತ್ತು ಶ್ರೀ ಗಂಗನಗರ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಈ ಕಾರ್ಯಕ್ರಮದಿಂದ ಪ್ರಯೋಜನವಾಗಿದೆ.
“ಕುಂಬಾರರ ಸಬಲೀಕರಣ (ಕುಮ್ಹಾರ್ ಸಶಕ್ತಿಕರಣ್) ಕಾರ್ಯಕ್ರಮವು ಕುಂಬಾರರ ಜೀವನವನ್ನು ಬದಲಿಸಿದೆ. ಕುಂಬಾರರ ಸಮುದಾಯವನ್ನು ಮತ್ತೆ ಮುಖ್ಯವಾಹಿನಿಗೆ ತರುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಕುಂಬಾರರಿಗೆ ಆಧುನಿಕ ಉಪಕರಣಗಳು ಮತ್ತು ತರಬೇತಿಯನ್ನು ನೀಡುವ ಮೂಲಕ, ನಾವು ಅವರನ್ನು ಸಮಾಜದೊಂದಿಗೆ ಮರುಸಂಪರ್ಕಿಸಲು ಮತ್ತು ಅವರ ಕಲೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಕೆವಿಐಸಿ ಇದುವರೆಗೆ 14,000 ಕ್ಕೂ ಹೆಚ್ಚು ವಿದ್ಯುತ್ ಕುಂಬಾರಿಕೆ ಚಕ್ರಗಳನ್ನು (ಚಾಕ್) ಕುಂಬಾರರಿಗೆ ವಿತರಿಸಿದೆ ಮತ್ತು ಈ ಕಾರ್ಯಕ್ರಮವು ಇಲ್ಲಿಯವರೆಗೆ ಸುಮಾರು 60,000 ಜನರಿಗೆ ಪ್ರಯೋಜನ ನೀಡಿದೆ ”ಎಂದು ಶ್ರೀ ಸಕ್ಸೇನಾ ಹೇಳಿದ್ದಾರೆ.
ಕುಂಬಾರಿಕೆ ಉತ್ಪನ್ನಗಳನ್ನು ತಯಾರಿಸಲು ಜೇಡಿಮಣ್ಣನ್ನು ಬೆರೆಸಲು ಬ್ಲಂಗರ್ ಮತ್ತು ಪಗ್ ಗಿರಣಿಗಳಂತಹ ಸಾಧನಗಳನ್ನು ಸಹ ಕೆವಿಐಸಿ ಯೋಜನೆಯಡಿಯಲ್ಲಿ ಒದಗಿಸುತ್ತದೆ. ಯಂತ್ರಗಳು ಕುಂಬಾರಿಕೆ ತಯಾರಿಕೆಯ ಪ್ರಕ್ರಿಯೆಯಿಂದ ಸಂಭವಿಸುವ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಈ ಮೂಲಕ ಕುಂಬಾರರ ಆದಾಯವನ್ನು 7-8 ಪಟ್ಟು ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.