ನವದೆಹಲಿ: ಕೋವಿಡ್ -19 ಹಾವಳಿಯಿಂದ ಪ್ರಪಂಚವೇ ನಲುಗುತ್ತಿದೆ. ಭಾರತದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಸರ್ಕಾರ ಜನರಲ್ಲಿ ಸ್ಟೇ @ ಹೋಮ್ ಎಂದು ತಾಕೀತು ಮಾಡಿದರೂ, ಜನರು ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಮಾಸ್ಕ್, ಕೈಗವಸು ಮುಂತಾದ ಅಗತ್ಯ, ಆರೋಗ್ಯ ಸ್ನೇಹಿ ವಸ್ತುಗಳ ಕೊರತೆಯೂ ಕಂಡು ಬರುತ್ತಿದ್ದು, ಲಭ್ಯವಿರುವ ಈ ರೀತಿಯ ವಸ್ತುಗಳನ್ನು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವವರ ಬಳಕೆಗಾಗಿ ಬಿಟ್ಟುಕೊಡುವಂತೆ ಸಾರ್ವಜನಿಕರಿಗೆ ಆರೋಗ್ಯ ಸಚಿವಾಲಯದಿಂದ ತಿಳಿಸಲಾಗಿದೆ.
ಸೋಂಕಿತರ ಸೇವೆ ಮಾಡುವ ಆರೋಗ್ಯ ರಕ್ಷಕರಿಗೆ ಕೈ, ಮುಖ ಸೇರಿದಂತೆ ಅವರ ಸಂಪೂರ್ಣ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಇವುಗಳು ತೀರಾ ಅನಿವಾರ್ಯ. ಆದ್ದರಿಂದ ಸಾಮಾನ್ಯ ಜನರು ಈ ತುರ್ತು ಸ್ಥಿತಿ ಅರಿತುಕೊಂಡು ಮನೆಯಲ್ಲಿಯೇ ತಯಾರಿಸಲಾದ ಮಾಸ್ಕ್ಗಳನ್ನು ಬಳಕೆ ಮಾಡುವಂತೆ ಮನವಿ ಮಾಡಲಾಗಿದೆ. ಜೊತೆಗೆ ಕನಿಷ್ಟ ಮಾಸ್ಕ್, ಕೈಗವಸುಗಳ ಎರಡು ಸೆಟ್ಗಳನ್ನಾದರೂ ಹೊಂದಿಕೊಂಡಿದ್ದು, ಒಂದನ್ನು ಶುಚಿಗೊಳಿಸಿದ ಸಂದರ್ಭದಲ್ಲಿ ಇನ್ನೊಂದನ್ನು ಬಳಕೆ ಮಾಡುವ ಮೂಲಕ ಸೋಂಕಿನಿಂದ ದೂರವಿರುವಂತೆಯೂ ತಿಳಿಸಲಾಗಿದೆ.
ಇನ್ನು ಒಬ್ಬರು ಬಳಕೆ ಮಾಡಿದ ಮಾಸ್ಕ್ ಅಥವಾ ಇನ್ಯಾವುದೇ ವಸ್ತುಗಳನ್ನು ಇನ್ನೊಬ್ಬರು ಬಳಕೆ ಮಾಡಬಾರದು ಎಂಬ ಮಹತ್ತರ ವಿಚಾರವನ್ನೂ ತಿಳಿಸಿದೆ. ಇನ್ನು ಆರೋಗ್ಯ ಕಾರ್ಯಕರ್ತರು ಪಿಪಿಇ ಗಳನ್ನು ಬಳಕೆ ಮಾಡುವಂತೆಯೂ ಸೂಚಿಸಲಾಗಿದೆ.
ಇನ್ನು ನೈರ್ಮಲ್ಯದ ವಿಚಾರದಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳದಂತೆ ತಿಳಿಸಿರುವ ಸಚಿವಾಲಯ, ಸ್ಯಾನಿಟೈಸರ್ಗಳನ್ನು ಬಳಸಿ ಕೈ ತೊಳೆಯುವಂತೆಯೂ ತಿಳಿಸಿದೆ. ನಮ್ಮನ್ನು ನಾವು ಸ್ವಚ್ಛವಾಗಿಡುವ ಮೂಲಕವೂ ಕೊರೊನಾ ಬಾಧಿಸದಂತೆ ತಡೆಯಲು ಸಾಧ್ಯ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ ಮರುಬಳಕೆಗೆ ಸಾಧ್ಯವಿರುವ ಮಾಸ್ಕ್ ಗಳನ್ನು ಬಳಸುವಂತೆಯೂ ಶಿಫಾರಸ್ಸು ಮಾಡಿದೆ.
ಕೊರೊನಾ ಉಸಿರಾಟದ ಮೂಲಕವೂ ಹರಡುವುದರಿಂದ ಮೂಗು, ಬಾಯಿಗಳನ್ನು ಮುಚ್ಚಿಟ್ಟುಕೊಳ್ಳುವುದು ತೀರಾ ಅಗತ್ಯ ಎಂಬುದನ್ನೂ ಆರೋಗ್ಯ ಸಚಿವಾಲಯ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.