ಬೆಂಗಳೂರು: 1000 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ಬೆಂಬಲ ನೀಡುವುದಾಗಿ ಇನ್ಫೋಸಿಸ್ ಫೌಂಡೇಶನ್ ಪ್ರಕಟಿಸಿದೆ. ಇದಕ್ಕಾಗಿ 20 ಕೋಟಿ ರೂ. ಗಳ ಯೋಜನೆಯೊಂದನ್ನು ಈ ಐಟಿ ಸಂಸ್ಥೆಯ ಸಿಆರ್ಎಸ್ ಈಗಾಗಲೇ ಸಿದ್ಧಪಡಿಸಿದೆ.
ಸ್ಮಾರ್ಟ್ ಕ್ಲಾಸ್ ಯೋಜನೆಯ ಅನುಷ್ಠಾನಕ್ಕಾಗಿ, ವಿಜ್ಞಾನ ಶಿಕ್ಷಕರ ತರಬೇತಿಗಾಗಿ 1 ಕೋಟಿ ರೂ. ಗಳನ್ನು ನೀಡುವುದಾಗಿಯೂ ಘೋಷಿಸಿದೆ.
ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಈ ಕುರಿತಾದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಕಮಿಷನರ್ ಆಫ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಕೆ ಜಿ ಜಗದೀಶ್ ಅವರೊಂದಿಗೆ ತಮ್ಮ ಜಯನಗರ ಕಛೇರಿಯಲ್ಲಿ ಚರ್ಚೆಯನ್ನೂ ನಡೆಸಿದ್ದಾರೆ. ಈ ವೇಳೆ 10 ಲೈಬ್ರರಿ ವ್ಯವಸ್ಥೆಯನ್ನು ಆಯ್ದ ಶಾಲೆಗಳಿಗೆ ಕಲ್ಪಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ.
ಯೋಜನೆಗೆ ಇದು ತಮ್ಮ ಪ್ರಾರಂಭಿಕ ಬೆಂಬಲವಾಗಿದೆ. ಈ ಯೋಜನೆಯ ಒಪ್ಪಂದಗಳಿಗೆ ಸಂಸ್ಥೆ ಸಹಿ ಹಾಕಿದ ನಂತರದಲ್ಲಿ ಇನ್ನೂ ಹೆಚ್ಚಿನ ಸಹಕಾರವನ್ನು ಶಿಕ್ಷಣ ಇಲಾಖೆಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅನಂತರದಲ್ಲಿ ಸರ್ಕಾರಿ ಶಾಲೆಗಳ ಅಗತ್ಯತೆ, ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಹಾಯವನ್ನು ಸಂಸ್ಥೆಯ ಕಡೆಯಿಂದ ಒದಗಿಸಲಾಗುವುದಾಗಿಯೂ ಅವರು ಈ ಸಂದರ್ಭ ಹೇಳಿದ್ದಾರೆ.
ಹಿಂದುಳಿದ ಶಾಲೆಗಳನ್ನು ಪ್ರಗತಿ ಹೊಂದುವಂತೆ ಮಾಡಲು ಈ ಕ್ರಮ ಅನುಸರಿಸಿರುವುದಾಗಿ ಸುಧಾ ಮೂರ್ತಿ ತಿಳಿಸಿದ್ದಾರೆ. ಲ್ಯಾಪ್ಟಾಪ್ ವ್ಯವಸ್ಥೆ, ಪ್ರೊಜೆಕ್ಟರ್, ಯುಪಿಎಸ್ ವ್ಯವಸ್ಥೆಗಳನ್ನು ಸ್ಮಾರ್ಟ್ ಕ್ಲಾಸ್ ಹೊಂದಿರಬೇಕಾಗುತ್ತದೆ. ಅಗತ್ಯತೆಗಳಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ ಶಾಲೆಗಳ ಆಯ್ಕೆ ಪ್ರಕ್ರಿಯೆ ನಡೆಸಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಅಲ್ಲದೆ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹಿಂದುಳಿದ ಜಿಲ್ಲೆಗಳ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡುವಂತೆಯೂ ಸುಧಾ ಮೂರ್ತಿ ಇಲಾಖೆಗೆ ಮನವಿ ಮಾಡಿದ್ದಾರೆ. ಆ ಮೂಲಕ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಆಧುನಿಕ ಶಿಕ್ಷಣ ಸರ್ಕಾರದ ವತಿಯಿಂದಲೇ ನೀಡುವಂತೆ ಮಾಡುವ ಮಾದರಿ ಕಾರ್ಯಕ್ಕೆ ಇನ್ಫೋಸಿಸ್ ಸಜ್ಜಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.