ನವದೆಹಲಿ: ಭಾರತೀಯ ರೈಲ್ವೇ 2030 ರ ವೇಳೆಗೆ “ನೆಟ್ ಝೀರೋ ಎಮಿಶನ್ ನೆಟ್ವರ್ಕ್ (ನಿವ್ವಳ ಶೂನ್ಯ ಹೊರಸೂಸುವಿಕೆ ಜಾಲ)” ವಾಗಿ ಬದಲಾಗಲು ಯೋಜಿಸುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದ್ದಾರೆ. “ರೈಲ್ವೆಯಿಂದ ಯಾವುದೇ ಹೊರಸೂಸುವಿಕೆ ಇರುರದಂತೆ ನೋಡಿಕೊಳ್ಳಲಿದ್ದೇವೆ, ರೈಲ್ವೇ ಶೀಘ್ರದಲ್ಲೇ ಸಂಪೂರ್ಣ ಶುದ್ಧ ಶಕ್ತಿಯ ಮೇಲೆ ಚಲಿಸುತ್ತದೆ” ಎಂದಿದ್ದಾರೆ.
ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಬ್ರೆಜಿಲ್ನೊಂದಿಗೆ ಪಾಲುದಾರಿತ್ವ ಪಡೆದುಕೊಳ್ಳಲು ಭಾರತ ಬಯಸುತ್ತಿದೆ ಎಂದು ಗೋಯಲ್ ಒತ್ತಿ ಹೇಳಿದ್ದಾರೆ. ಭಾರತ-ಬ್ರೆಜಿಲ್ ಬಿಸಿನೆಸ್ ಫೋರಂನಲ್ಲಿ “ಭಾರತವು ಬ್ರೆಜಿಲ್ನೊಂದಿಗೆ ಒಟ್ಟಾಗಿ ಕೆಲಸ ಮಾಡಲು ಇಷ್ಟಪಡುತ್ತದೆ” ಎಂದು ಅವರು ಹೇಳಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಸಚಿವರು, “ಭಾರತವು $5 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯಲು ಬೆಂಬಲ ನೀಡುತ್ತಿರುವ ಯುವ ಜನರಿಂದ ತುಂಬಿದೆ. ಬಲವಾದ ನ್ಯಾಯಾಂಗ ಮತ್ತು ಮಾಧ್ಯಮ, ಸ್ಥಿರ ಸರ್ಕಾರದ ನೀತಿಗಳು ಮತ್ತು ವ್ಯಾಪಾರ ಸ್ನೇಹಿ ವಾತಾವರಣ ಭಾರತದಲ್ಲಿ ಇದೆ” ಎಂದಿದ್ದಾರೆ.
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಆಗಮಿಸಿದ್ದ ಸಂದರ್ಭದಲ್ಲಿ ಆಯೋಜಿಸಲಾದ ವೇದಿಕೆಯಲ್ಲಿ ಮಾತನಾಡಿದ ರೈಲ್ವೆ ಸಚಿವರು, 2024 ರ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣವಾಗಿ ವಿದ್ಯುತ್ಗೆ ಬದಲಾಗುವತ್ತ ಕೆಲಸ ಮಾಡುತ್ತಿದೆ ಎಂದು ಹೇಳಿದರು.
“2024 ರ ಹೊತ್ತಿಗೆ, ಇಡೀ ಭಾರತೀಯ ರೈಲ್ವೆ ಶೇ. 100 ರಷ್ಟು ವಿದ್ಯುತ್ ಚಾಲಿತವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ವಿದ್ಯುಚ್ಛಕ್ತಿಯ ಮೇಲೆ ಸಂಪೂರ್ಣವಾಗಿ ಚಲಿಸುವ ವಿಶ್ವದ ಮೊದಲ ರೈಲ್ವೆ ಜಾಲವಾಗಲಿದೆ. ಪರಿಸರದ ಮೇಲಿನ ನಮ್ಮ ಜವಾಬ್ದಾರಿಯ ಬಗ್ಗೆ ನಮಗೆ ಬಹಳ ಜಾಗೃತಿ ಇದೆ. ರೈಲು ಜಾಲದ ತ್ವರಿತ ವಿದ್ಯುದೀಕರಣವನ್ನು ನಾವು ಪ್ರಾರಂಭಿಸುತ್ತಿದ್ದೇವೆ ” ಎಂದು ಗೋಯಲ್ ಹೇಳಿದ್ದಾರೆ.
ರೈಲ್ವೆ ಈಗಾಗಲೇ ಲೋಕೋಮೋಟಿವ್ ಡೀಸೆಲ್ ಎಂಜಿನ್ಗಳನ್ನು ಕೈಬಿಡಲು ಪ್ರಾರಂಭಿಸಿದ್ದು, ಅವುಗಳನ್ನು ಕ್ರಮೇಣ ಸೇವೆಯಿಂದ ಹೊರಗಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.