ಬೆಂಗಳೂರು: ರಾತ್ರಿಯಲ್ಲಿ ಗಸ್ತು ತಿರುಗುವಾಗ ಮತ್ತು ಪೊಲೀಸ್ ಠಾಣೆಯಲ್ಲಿ ಕಾವಲು ಕಾಯುವ ಸಮಯದಲ್ಲಿ ಬೆಂಗಳೂರು ಪೊಲೀಸ್ ಪಡೆಗಳಿಗೆ ಸಹಾಯ ಮಾಡುವ ಸಲುವಾಗಿ ಬೀದಿ ನಾಯಿಗಳಿಗೆ ತರಬೇತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೀದಿ ನಾಯಿಗಳನ್ನು ಪೊಲೀಸ್ ಇಲಾಖೆಯ ಸಹಾಯಕ್ಕೆ ಬಳಸಲು ಮತ್ತು ಅವುಗಳಿಗೆ ತರಬೇತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಬೆಂಗಳೂರು ಪೊಲೀಸರ ದಕ್ಷಿಣ ವಿಭಾಗವು ತನ್ನ ವ್ಯಾಪ್ತಿಯಲ್ಲಿನ 17 ಪೊಲೀಸ್ ಠಾಣೆಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ. ಈ ಕಾರ್ಯಕ್ರಮದ ಹಿಂದಿನ ರೂವಾರಿ ಉಪ ಪೊಲೀಸ್ ಆಯುಕ್ತೆ ರೋಹಿಣಿ ಕಟೋಚ್ ಎಂದು ಹೇಳಲಾಗಿದೆ.
ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, “ಕನಿಷ್ಠ 50-60 ನಾಯಿಗಳು ಹೆಚ್ಚಾಗಿ ಪೊಲೀಸ್ ಠಾಣೆಯ ಹೊರಗೆ ಅಲೆದಾಡುತ್ತಿರುತ್ತವೆ, ಅನೇಕ ನಿವಾಸಿಗಳು ಅವುಗಳಿಗೆ ಆಹಾರವನ್ನು ನೀಡುತ್ತಿರುತ್ತಾರೆ ಮತ್ತು ಅವುಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ನಮ್ಮ ಅಧಿಕಾರಿಗಳಿಗೂ ಆ ನಾಯಿಗಳಿಗೆ ಆಹಾರ ನೀಡುವಂತೆ ಮತ್ತು ಅವುಗಳಿಗೆ ನಮ್ಮ ಆಜ್ಞೆಗಳನ್ನು ಪಾಲಿಸುವಂತಹ ಮೂಲಭೂತ ತರಬೇತಿಯನ್ನು ನೀಡುವಂತೆ ಕೇಳಿಕೊಂಡಿದ್ದೇನೆ. ಇದರಿಂದ ಅವುಗಳನ್ನು ಕಾವಲು ನಾಯಿಗಳಾಗಿ ಬಳಸಬಹುದು. ಇದಲ್ಲದೆ, ಬೀದಿ ನಾಯಿಗಳು ಇನ್ನಿತರ ತಳಿಯ ನಾಯಿಗಳಿಗಿಂತ ಭಿನ್ನವಾಗಿರುತ್ತದೆ, ಅವುಗಳ ನಿರ್ವಹಣೆಯೂ ಅತೀ ಸುಲಭ ಮತ್ತು ನಿಧಾನವಾಗಿ ಈ ನಾಯಿಗಳು ಉತ್ತಮ ಆಕಾರವನ್ನು ಪಡೆಯಲಿವೆ” ಎಂದಿದ್ದಾರೆ.
ಬೀದಿ ನಾಯಿಗಳಿಗೆ ತರಬೇತಿ ನೀಡುತ್ತಿರುವ ಮೊದಲ ನಗರ ಬೆಂಗಳೂರು ಅಲ್ಲ. ಕಳೆದ ವರ್ಷ, ಉತ್ತರಾಖಂಡ ಪೊಲೀಸರು ಬೀದಿ ನಾಯಿಗಳನ್ನು ಪೊಲೀಸ್ ಪಡೆಯ ಭಾಗವಾಗಿ ಮಾಡುವ ಸಲುವಾಗಿ ಅವುಗಳಿಗೆ ತರಬೇತಿ ನೀಡಲು ಇದೇ ರೀತಿಯ ಉಪಕ್ರಮವನ್ನು ಕೈಗೊಂಡಿದ್ದರು. ವೃತ್ತಿಪರವಾಗಿ ತರಬೇತಿ ಪಡೆದ ಬೀದಿ ನಾಯಿಗಳ ಕಾರ್ಯಕ್ಷಮತೆಯ ಬಗ್ಗೆ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.