ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದೆ. ಈ ಕಾರ್ಯಕ್ರಮಕ್ಕೆ ‘ಸಪ್ತಪದಿ’ ಎಂದು ಹೆಸರಿಸಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಈ ಕಾರ್ಯಕ್ರಮದ ಲಾಂಛನ ಮತ್ತು ಕರಪತ್ರವನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.
‘ಸಪ್ತಪದಿ’ ಕಾರ್ಯಕ್ರಮದಡಿಯಲ್ಲಿ ವಿವಾಹವಾಗುವ ವಧುವಿಗೆ ಸರ್ಕಾರದಿಂದ 10 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಮಂಗಳಸೂತ್ರಕ್ಕಾಗಿ 40 ಸಾವಿರ ರೂಪಾಯಿ ನೀಡಲಾಗುತ್ತದೆ. ವರನಿಗೆ 5 ಸಾವಿರ ರೂಪಾಯಿ ನೀಡಲಾಗುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿರುವ ದೇವಾಲಯಗಳ ಕಿರುಪಟ್ಟಿಯನ್ನು ಮುಜರಾಯಿ ಇಲಾಖೆ ಸಿದ್ಧ ಪಡಿಸಲಿದೆ ಎಂದು ಸರ್ಕಾರ ತಿಳಿಸಿದೆ.
ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರಿಗೂ ಅವರವರ ಸಂಪ್ರದಾಯದಂತೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಗಳ ಪೋಷಕರ ಭಾಗವಹಿಸುವಿಕೆ ಕಡ್ಡಾಯವಾಗಿದೆ. ಪೋಷಕರ ಅನುಮತಿ ಇಲ್ಲದೆ ವಿವಾಹವಾಗಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸುಮಾರು 90 ರಿಂದ 100 ದೇವಾಲಯಗಳಲ್ಲಿ 1 ಸಾವಿರ ವಿವಾಹ ಕಾರ್ಯಕ್ರಮವನ್ನು ನಡೆಸುವ ಚಿಂತನೆಯನ್ನು ನಡೆಸಲಾಗಿದೆ.
ಸಾಮೂಹಿಕ ವಿವಾಹ ನಡೆಯುವುದಕ್ಕೂ 30 ದಿನಗಳ ಮೊದಲು ವಧು ವರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಮೊದಲ ಹಂತದಲ್ಲಿ ಎಪ್ರಿಲ್ ತಿಂಗಳಲ್ಲಿ ಮತ್ತು ಎರಡನೇ ಹಂತದಲ್ಲಿ ಮೇ ತಿಂಗಳಲ್ಲಿ ಉತ್ತಮ ಆದಾಯವಿರುವ ‘ಎ’ ವರ್ಗದ ನೂರು ದೇವಾಲಯಗಳಲ್ಲಿ ವಿವಾಹಗಳು ನಡೆಯಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.