ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಮುಂದಿಡುತ್ತಿದೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ (I4C) ಮತ್ತು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಅನ್ನು ಅನಾವರಣಗೊಳಿಸಿದರು.
ಯಾವುದೇ ರೀತಿಯ ಸೈಬರ್ ಅಪರಾಧಗಳ ಬಗ್ಗೆ ದೇಶದ ನಾಗರಿಕರು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ದೂರುಗಳನ್ನು ನೀಡಬಹುದಾಗಿದೆ.
“ಸೈಬರ್ ಅಪರಾಧದ ವಿರುದ್ಧ ಹೋರಾಡಲು I4Cಯು 7 ಘಟಕದ ಯೋಜನೆಯಾಗಿದ್ದು, ಇದರಲ್ಲಿ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್, ಬೆದರಿಕೆಗಳ ವಿಶ್ಲೇಷಣೆ, ಸಾಮರ್ಥ್ಯ ವೃದ್ಧಿ, ಸಂಶೋಧನೆ ಮತ್ತು ನಾವೀನ್ಯತೆ, ಸೈಬರ್ ಅಪರಾಧ ನಿರ್ವಹಣೆಗೆ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಜಂಟಿ ಸೈಬರ್ ಅಪರಾಧ ತನಿಖಾ ವೇದಿಕೆ ಒದಗಿಸುವುದು ಸೇರಿದೆ” ಎಂದು ಶಾ ಅವರು ಟ್ವೀಟ್ ಮಾಡಿದ್ದಾರೆ.
“ಈ ಅತ್ಯಾಧುನಿಕ ಕೇಂದ್ರವು ನವದೆಹಲಿಯಲ್ಲಿದೆ. ಎಲ್ಲಾ ರೀತಿಯ ಸೈಬರ್ ಅಪರಾಧಗಳನ್ನು ಸಮಗ್ರ ಮತ್ತು ಸಂಘಟಿತ ರೀತಿಯಲ್ಲಿ ಎದುರಿಸಲು I4C ಅನ್ನು ಸ್ಥಾಪನೆ ಮಾಡುವ ಯೋಜನೆಗೆ 415.86 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 2018 ರ ಅಕ್ಟೋಬರ್ನಲ್ಲಿ ಅನುಮೋದನೆ ನೀಡಲಾಯಿತು” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
I4C ಏಳು ಘಟಕಗಳನ್ನು ಹೊಂದಿದೆ- ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣೆ ಘಟಕ, ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್, ರಾಷ್ಟ್ರೀಯ ಸೈಬರ್ ಅಪರಾಧ ತರಬೇತಿ ಕೇಂದ್ರ, ಸೈಬರ್ ಅಪರಾಧ ಪರಿಸರ ವ್ಯವಸ್ಥೆ ನಿರ್ವಹಣಾ ಘಟಕ, ರಾಷ್ಟ್ರೀಯ ಸೈಬರ್ ಅಪರಾಧ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರ, ರಾಷ್ಟ್ರೀಯ ಸೈಬರ್ ಅಪರಾಧ ವಿಧಿವಿಜ್ಞಾನ ಪ್ರಯೋಗಾಲಯ ಪರಿಸರ ವ್ಯವಸ್ಥೆ ಮತ್ತು ಜಂಟಿ ಸೈಬರ್ ಅಪರಾಧ ತನಿಖಾ ತಂಡಕ್ಕೆ ವೇದಿಕೆ. 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಾದೇಶಿಕ ಸೈಬರ್ ಅಪರಾಧ ಸಮನ್ವಯ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ಕೂಡ ಪಡೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.