ನವದೆಹಲಿ: ಶಸ್ತ್ರಾಸ್ತ್ರ ಪಡೆಗಳ ಕಲ್ಯಾಣಕ್ಕೆ ಕೇಂದ್ರ ಸರಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಯೋಧರಿಗೆ ನೂರು ದಿನಗಳ ರಜೆಯನ್ನು ಒದಗಿಸುವ ನಿಟ್ಟಿನಲ್ಲಿ ಬೇಕಾದ ಸಿದ್ಧತೆಗಳನ್ನು ಕೇಂದ್ರ ಗೃಹ ಸಚಿವಾಲಯ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಅಲ್ಲದೆ ಯೋಧರ ಕುಟುಂಬ ಸದಸ್ಯರಿಗೆ ಆರೋಗ್ಯ ಕಾರ್ಡನ್ನು ಕೂಡ ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ.
ದೆಹಲಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ಕೇಂದ್ರ ಕಚೇರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, “ಶಸ್ತ್ರಾಸ್ತ್ರ ಪಡೆಗಳು ಎಲ್ಲಾ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಪರಿಕರಗಳನ್ನು ಹೊಂದಿದಾಗ ಅವುಗಳ ಸಾಮರ್ಥ್ಯ, ಕಣ್ಗಾವಲು ಮತ್ತು ಕರ್ತವ್ಯದಲ್ಲಿರುವ ಸಮಯದಲ್ಲಿನ ಜಾಗೃತಿ ವೃದ್ಧಿಯಾಗುತ್ತದೆ” ಎಂದಿದ್ದಾರೆ.
ಕೇಂದ್ರೀಯ ಶಸಸ್ತ್ರ ಪೊಲೀಸ್ ಪಡೆಗಳಲ್ಲಿ ಕೆಲಸ ಮಾಡುವ ಕೆಳದರ್ಜೆಯ ಯೋಧರಿಗೆ ತಮ್ಮ ಕರ್ತವ್ಯದ ಕಾರಣದಿಂದಾಗಿ ಕೌಟುಂಬಿಕ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಹೀಗಾಗಿ ಅವರು ತಮ್ಮ ಕುಟುಂಬದೊಂದಿಗೆ ವರ್ಷಕ್ಕೆ 100 ದಿನಗಳನ್ನು ಕಳೆಯಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದಿದ್ದಾರೆ.
“ಈಗಾಗಲೇ ನಾನು ಸಮಿತಿಗಳನ್ನು ರಚನೆ ಮಾಡಿದ್ದೇನೆ ಮತ್ತು ಎಲ್ಲಾ ಸಶಸ್ತ್ರ ಪಡೆಗಳ ಡೈರೆಕ್ಟರ್ ಜನರಲ್ಗಳಿಗೆ ಸಲಹೆಗಳನ್ನು ನೀಡಿದ್ದೇನೆ. ಕಂಪ್ಯೂಟರೀಕೃತ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸುವಂತೆಯೂ ಕೆಲವೊಂದು ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.