ನವದೆಹಲಿ: ಸರ್ಕಾರದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಉಪಕ್ರಮವು ಜನವರಿ 15, 2020 ರಿಂದ ಜಾರಿಗೆ ಬರಲಿದೆ. ಈ ಯೋಜನೆಯನ್ನು ಆರಂಭಿಕವಾಗಿ 12 ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಗೋವಾ, ಮಧ್ಯಪ್ರದೇಶ, ತ್ರಿಪುರ ಮತ್ತು ಜಾರ್ಖಂಡ್ಗಳಲ್ಲಿ ಇದು ಮೊದಲು ಅನುಷ್ಠಾನಗೊಳ್ಳಲಿದೆ.
ಈ 12 ರಾಜ್ಯಗಳಲ್ಲಿ, 35 ದಶಲಕ್ಷ ಜನರು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಮುಂದೆ ಈ ರಾಜ್ಯಗಳ ಪಡಿತರ ಚೀಟಿದಾರರು ಯಾವುದೇ ರಾಜ್ಯದಲ್ಲಿ ತಮ್ಮ ಪಡಿತರ ಚೀಟಿಯನ್ನು ಬಳಸಿ ಆಹಾರ ಧಾನ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದೇಶದಲ್ಲಿ ಒಟ್ಟು 79 ಕೋಟಿ ಜನರು ಪಡಿತರ ಚೀಟಿಯನ್ನು ಹೊಂದಿದ್ದಾರೆ.
ಈ ಯೋಜನೆಯು ವಲಸೆ ಕಾರ್ಮಿಕರಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ ಯಾವುದೇ ನ್ಯಾಯ ಬೆಲೆ ಅಂಗಡಿಯಿಂದ (ಎಫ್ಪಿಎಸ್) ತಮ್ಮ ಪಡಿತರ ಚೀಟಿ ಬಳಸಿ ಸಬ್ಸಿಡಿ ದರದಲ್ಲಿ ತಮ್ಮ ಆಹಾರ ಧಾನ್ಯಗಳನ್ನು ಪಡೆಯಲು ಅವಕಾಶ ಸಿಗಲಿದೆ.
ePoS (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನಗಳಲ್ಲಿ ಬಯೋಮೆಟ್ರಿಕ್ / ಆಧಾರ್ ದೃಢೀಕರಣದ ನಂತರ ಫಲಾನುಭವಿಗಳು ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ರಾಪಾಸ್ವಾನ್ ಪ್ರಕಾರ, ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಉಪಕ್ರಮದ ಅಡಿಯಲ್ಲಿ ಅಂತರ್-ರಾಜ್ಯ ಪೋರ್ಟಬಿಲಿಟಿ ಸೌಲಭ್ಯವು ePoS ಸಾಧನಗಳನ್ನು ಹೊಂದಿರುವ ನ್ಯಾಯ ಬೆಲೆ ಅಂಗಡಿಗಳ ಮೂಲಕ ಮಾತ್ರ ಲಭ್ಯವಿರುತ್ತದೆ.
ಡಿಸೆಂಬರ್ 1 ರಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾಗಿರುವ ರಾಮ್ ವಿಲಾಸ್ ಪಾಸ್ವಾನ್ ಅವರು, 2020 ರ ಜೂನ್ 1 ರಿಂದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. “ಕೆಲಸಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುವ ಕಾರ್ಮಿಕರಿಗೆ, ದೈನಂದಿನ ಕೂಲಿ ಕಾರ್ಮಿಕರಿಗೆ ಈ ಯೋಜನೆ ಸಾಕಷ್ಟು ಪ್ರಯೋಜನವನ್ನು ತಂದುಕೊಡಲಿದೆ ” ಎಂದು ಪಾಸ್ವಾನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.