ಶ್ರೀನಗರ: ಸಂವಿಧಾನ 370 ನೇ ವಿಧಿಯನ್ನು ರದ್ದುಪಡಿಸಿದ ನಂತರದ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ. ಗುರುವಾರ ಅಲ್ಲಿನ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆಯನ್ನು ಎದುರಿಸಲಿದೆ. ಈ ಚುನಾವಣೆ 310 ಮತಗಟ್ಟೆಗಳಲ್ಲಿ 1065 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. ಕಾಂಗ್ರೆಸ್, ಎಡ, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಚುನಾವಣೆಯನ್ನು ಬಹಿಷ್ಕರಿಸಿವೆ.
26,629 ಮತದಾರರು ಬಿಡಿಸಿಗಳ ಅಧ್ಯಕ್ಷರನ್ನು ಇಂದು ಆಯ್ಕೆ ಮಾಡಲಿದ್ದಾರೆ. 26,629 ಮತದಾರರ ಪೈಕಿ 8,313 ಮಹಿಳೆಯರು ಮತ್ತು 18,316 ಪುರುಷರು ಮತದಾನ ಮಾಡಲಿದ್ದಾರೆ. ಈ ರಾಜ್ಯದಲ್ಲಿ 316 ಬ್ಲಾಕ್ಗಳಿವೆ, ಆದರೆ 310 ರಲ್ಲಿ ಮಾತ್ರ ಚುನಾವಣೆ ಜರುಗುತ್ತಿದೆ. ಎರಡು ಬ್ಲಾಕ್ಗಳಲ್ಲಿ ಸರಪಂಚ್ಗಳು ಇಲ್ಲದ ಕಾರಣ ಮತ್ತು ಮಹಿಳೆಯರಿಗೆ ಮೀಸಲಾಗಿರುವ ನಾಲ್ಕು ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲದ ಕಾರಣ ಅಲ್ಲಿ ಚುನಾವಣೆ ನಡೆಯುತ್ತಿಲ್ಲ.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಅಂದರೆ 101 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಮತ್ತು ದಕ್ಷಿಣ ಕಾಶ್ಮೀರದ ಶೋಪಿಯಾನ್ನಲ್ಲಿ ಅತಿ ಕಡಿಮೆ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
“ಬಾರಾಮುಲ್ಲಾದಲ್ಲಿ 90, ಜಮ್ಮುವಿನಲ್ಲಿ 82, ರಾಜೌರಿಯಲ್ಲಿ 76, ದೋಡಾದಲ್ಲಿ 74, ಕಥುವಾದಲ್ಲಿ 72, ಉಧಂಪುರ್ ಮತ್ತು ಬುದ್ಗಾಂನಲ್ಲಿ ತಲಾ 58, ಕಿಶ್ತ್ವಾರ್ನಲ್ಲಿ 44, ರಾಂಬನ್ನಲ್ಲಿ 43 ಮತ್ತು ರಾಸಿಯಲ್ಲಿ 39 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ” ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಶ್ರೀನಗರ ಜಿಲ್ಲೆಯಿಂದ ಐವರು ಅಭ್ಯರ್ಥಿಗಳು ಮತ್ತು ಕಾರ್ಗಿಲ್ ನಿಂದ 38 ಮತ್ತು ಲೇಹ್ನಿಂದ 36 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಮತದಾನ ಮುಕ್ತಾಯವಾದ ಬಳಿಕ ಮಧ್ಯಾಹ್ನ 3 ಗಂಟೆಯಿಂದ ಮತ ಎಣಿಕೆಯ ಕಾರ್ಯ ನಡೆಯಲಿದೆ. ಆಗಸ್ಟ್ 5 ರಂದು ಸಂವಿಧಾನ 370 ನೇ ವಿಧಿಯನ್ನು ರದ್ದುಗೊಳಿಸಿ ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.