ಚೆನ್ನೈ : ಮಕ್ಕಳು ಶಾಲೆಯಿಂದ ಹೊರಗೆ ಹೋಗಿ ದುಡಿಮೆಯನ್ನು ಆರಂಭಿಸಲು ಬಹಳ ಪ್ರಮುಖವಾದ ಕಾರಣ ಹಸಿವು. ಇದನ್ನು ಅರ್ಥ ಮಾಡಿಕೊಂಡಿರುವ ಚೆನ್ನೈನ ಶಾಲಾ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಸಂಜೆಯ ವೇಳೆ ಊಟವನ್ನು ಒದಗಿಸುತ್ತಿದ್ದಾರೆ.
ಸರ್ಕಾರಿ ಅನುದಾನಿತ ಮದ್ರಾಸ್ ಪ್ರೋಗ್ರೆಸಿವ್ ಯೂನಿಯನ್ ಹೈಯರ್ ಸೆಕೆಂಡರಿ ಸ್ಕೂಲ್ ನ ಮುಖ್ಯೋಪಾಧ್ಯಾಯಿನಿ ಆಗಿರುವ ನಿರ್ಮಲಾ ಅವರು ತನ್ನ ಶಾಲೆಯ ವಿದ್ಯಾರ್ಥಿಗಳ ಪಾಲಿನ ಅನ್ನಪೂರ್ಣೆ ಎನಿಸಿಕೊಂಡಿದ್ದಾರೆ.
130 ವರ್ಷಗಳ ಹಿಂದಿನ ಈ ಶಾಲೆಯಲ್ಲಿ ಪ್ರಸ್ತುತ 275 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಈ ಶಾಲೆ ಉಳಿದ ಶಾಲೆಗಳಿಗಿಂತ ತುಸು ಭಿನ್ನವಾಗಿದೆ. ಯಾಕೆಂದರೆ ಈ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸಂಜೆಯ ಹೊತ್ತಲ್ಲೂ ಬಿಸಿಯೂಟವನ್ನು ಪೂರೈಕೆ ಮಾಡಲಾಗುತ್ತಿದೆ. ವಾರದ ಐದು ದಿನಗಳಲ್ಲಿ ಸಂಜೆಯ ವೇಳೆ ಊಟವನ್ನು ನೀಡಲಾಗುತ್ತದೆ. ಇದರಿಂದ ಅಲ್ಲಿ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ ಮತ್ತು ಮಕ್ಕಳ ಶೈಕ್ಷಣಿಕ ಸಾಧನೆಗಳು ಉತ್ತಮಗೊಂಡಿದೆ.
ಇಲ್ಲಿಗೆ ಬರುವ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದಾರೆ. ಮಾತ್ರವಲ್ಲದೆ, ಶಾಲೆಗೆ ಹೋಗುತ್ತಿರುವ ತಮ್ಮ ಕುಟುಂಬದ ಮೊದಲ ಸದಸ್ಯರಾಗಿದ್ದಾರೆ.
“ಇಲ್ಲಿನ ಬಹುತೇಕ ಮಕ್ಕಳು ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಬಿಸಿ ಊಟವನ್ನು ಸೇವಿಸಿ ಇಡೀ ದಿನವನ್ನು ಕಳೆಯುತ್ತಿದ್ದರು ಎಂಬುದು ನಮಗೆ ತಿಳಿದುಬಂತು. ಹೀಗಾಗಿ ನಾವು ಸಂಜೆ ಬಿಸಿಯೂಟವನ್ನು ಪೂರೈಕೆ ಮಾಡಲು ನಿರ್ಧರಿಸಿದೆವು” ಎಂದು ನಿರ್ಮಲಾ ಅವರು ಹೇಳುತ್ತಾರೆ.
ತಿಂಗಳ ಆರಂಭದಲ್ಲಿ ಈ ಶಾಲೆಯ ಎಲ್ಲಾ ಶಿಕ್ಷಕರುಗಳು ತಮ್ಮ ವೇತನದಲ್ಲಿ ಒಂದು ಸಾವಿರ ರೂಪಾಯಿಯನ್ನು ಮಕ್ಕಳ ಕಲ್ಯಾಣ ನಿಧಿಗೆ ನೀಡುತ್ತಾರೆ. ಈ ಹಣದಿಂದ ಮಕ್ಕಳ ಊಟಕ್ಕೆ ಬೇಕಾಗುವ ತರಕಾರಿ ಮತ್ತು ಅಕ್ಕಿಯನ್ನು ಖರೀದಿ ಮಾಡಲಾಗುತ್ತದೆ. ಇಬ್ಬರು ಶಿಕ್ಷಕರು ಮತ್ತು ಇಬ್ಬರು ಸಿಬ್ಬಂದಿಗಳು ಊಟವನ್ನು ತಯಾರು ಮಾಡುತ್ತಾರೆ.
ಮಕ್ಕಳ ಹಸಿವನ್ನು ನೀಗಿಸುವ ಸಲುವಾಗಿ ಮುಖ್ಯೋಪಾಧ್ಯಾಯಿನಿ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಶ್ಲಾಘನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.