ನಾಗ್ಪುರ: ವಿಜಯದಶಮಿ ಉತ್ಸವದ ಪ್ರಯುಕ್ತ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ರಾಜಕೀಯ, ಸಾಮಾಜಿಕ, ರಾಷ್ಟ್ರೀಯ ಭದ್ರತೆ ಮತ್ತು ಕೌಟುಂಬಿಕ ಮೌಲ್ಯಗಳು ಹೀಗೆ ನಾನಾ ವಿಷಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವವು ಪಾಶ್ಚಿಮಾತ್ಯ ಜಗತ್ತಿನ ಪ್ರಭಾವಕ್ಕೆ ಒಳಗಾಗಿಲ್ಲ, ಅದು ದೇಶೀಯವಾಗಿದೆ ಎಂಬುದನ್ನು ಕಳೆದ ಎರಡು ಚುನಾವಣೆಗಳು ತೋರಿಸಿಕೊಟ್ಟಿವೆ. 370ನೇ ವಿಧಿಯ ರದ್ಧತಿಯು ಆಯ್ಕೆಗೊಂಡ ಸರ್ಕಾರಕ್ಕೆ ಜನರ ಆಕಾಂಕ್ಷೆಗಳನ್ನು ಈಡೇರಿಸುವ, ದೇಶದ ಹಿತಾಸಕ್ತಿ ಕಾಯ್ದುಕೊಳ್ಳುವ ಧೈರ್ಯ ಇದೆ ಎಂಬುದನ್ನು ಸಾರಿ ಹೇಳಿದೆ ಎಂದಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತವು ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸಿನಲ್ಲಿ ಭಯ ಸೃಷ್ಟಿಸುತ್ತಿದೆ. ಆತಂಕ ಶಕ್ತಿಗಳಿಗೆ ಭಾರತ ಬಲಿಷ್ಠ ಮತ್ತು ಅದ್ಭುತವಾಗಿರುವುದು ಬೇಕಾಗಿಲ್ಲ. ವೈವಿಧ್ಯತೆಯು ನಮ್ಮ ರಾಷ್ಟ್ರದ ಆಂತರಿಕ ಶಕ್ತಿ. ಆದರೆ ಜಾತಿ, ಮತ, ಭಾಷೆ ಮತ್ತು ಪ್ರದೇಶದ ವೈವಿಧ್ಯತೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒಡೆಯಲು ಮತ್ತು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಬಳಸಿಕೊಳ್ಳುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬುದು ಅನಿವಾರ್ಯವಲ್ಲ, ಆದರೆ ಇದು ಸ್ವಹಿತಾಸಕ್ತಿಯ, ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವುದರ ಆಧಾರದ ಮೇಲೆ ಮೇಲೆ ಅವಲಂಬಿತವಾಗಿರಬಾರದು.
ಅದೃಷ್ಟವಶಾತ್, ನಮ್ಮ ದೇಶದ ಭದ್ರತಾ ಸಾಮರ್ಥ್ಯ, ನಮ್ಮ ಸಶಸ್ತ್ರ ಪಡೆಗಳ ಸನ್ನದ್ಧತೆ, ನಮ್ಮ ಸರ್ಕಾರದ ಭದ್ರತಾ ನೀತಿ ಉನ್ನರ ಮಟ್ಟಕ್ಕೆ ಬೆಳೆದಿದ್ದು, ನಾವು ಜಾಗರೂಕರಾಗಿ ಮತ್ತು ಆತ್ಮವಿಶ್ವಾಸದಿಂದ ಇರುವಂತಾಗಿದೆ. ನಮ್ಮ ಭೂಮಿ ಮತ್ತು ಕಡಲ ಗಡಿಗಳಲ್ಲಿ ಭದ್ರತಾ ಜಾಗರೂಕತೆ ಈಗ ಉತ್ತಮವಾಗಿದೆ. ಗಡಿಯುದ್ದಕ್ಕೂ ಜಾಗರೂಕತೆ ಮೊದಲಿಗಿಂತ ಉತ್ತಮವಾಗಿದೆ. ದೇಶದೊಳಗಿನ ಭಯೋತ್ಪಾದನೆಯ ಕೃತ್ಯಗಳೂ ಕಡಿಮೆಯಾಗಿವೆ ಎಂದರು.
ಸ್ವಯಂಸೇವಕರು ಸಂವಾದ ಮತ್ತು ಸಹಕಾರವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲವು ವಿಷಯಗಳ ಬಗ್ಗೆ ನ್ಯಾಯಾಲಯಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಿರ್ಧಾರ ಏನೇ ಇರಲಿ, ಪರಸ್ಪರ ಸೌಹಾರ್ದತೆಗೆ ಧಕ್ಕೆ ತರದಿರುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ.
ಭಾರತವು ಎಲ್ಲಾ ಧರ್ಮದ ಎಲ್ಲ ಭಾರತೀಯರಿಗೆ ಸೇರಿದ್ದು, ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯವಾಗದಂತೆ ನೋಡಿಕೊಳ್ಳುವುದು ಆಡಳಿತಗಾರನ ಕರ್ತವ್ಯವಾಗಿದೆ. ಸಾಂವಿಧಾನಿಕ ವಿರೋಧಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜನರನ್ನು ಸಂಘವು ಎಂದಿಗೂ ಬೆಂಬಲಿಸಿಲ್ಲ ಮತ್ತು ಅದು ಅಂತಹ ಪ್ರತಿಯೊಂದು ಘಟನೆಗಳ ವಿರುದ್ಧ ನಿಂತಿದೆ. ಅಂತಹ ಘಟನೆಗಳು ನಡೆಯದಂತೆ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ ಎಂದರು.
ಗುಂಪು ಹಲ್ಲೆ ಭಾರತದ ಸಂಸ್ಕೃತಿಯಲ್ಲ, ಇದು ವಿದೇಶದಿಂದ ಬಂದುದು. ನಾವು ಭಾರತೀಯರು ಭಾತೃತ್ವದಲ್ಲಿ ನಂಬಿಕೆ ಇಡುತ್ತೇವೆ. ಹಿಂದೂಗಳ ಮೇಲೆ ಯಾವುದನ್ನೂ ಹೇರುವ ಪ್ರಯತ್ನ ಸಲ್ಲದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.